ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ಇದರ 16ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23-09-2023ರಂದು ಬೆಳಿಗ್ಗೆ ಗಂಟೆ 9.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ದಿನಾಂಕ 17-09-2023ರಂದು ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ‘ಸ್ವರ ಕುಡ್ಲ’ ಸೀಸನ್-5 ಸಂಗೀತ ಸ್ಪರ್ಧೆಯು ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ದಿ. ಲಿಯಾಂಡರ್ ವರ್ನನ್ ನೊರೊನ್ಹಾ ಇವರ ಸ್ಮರಣಾರ್ಥ ‘ಸಿಂಫನಿ ಮ್ಯೂಸಿಕಲ್ ಇನ್ ಸ್ಟ್ರುಮೆಂಟ್ ಮಳಿಗೆಯ ಶ್ರೀ ಲಾಯ್ ನೊರೊನ್ಹಾ ಇವರ ಸಹಕಾರದೊಂದಿಗೆ ಈ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ದಿನಾಂಕ 23-09-2023ರಂದು ಪುರಭವನದಲ್ಲಿ ‘ಸ್ವರ ಕುಡ್ಲ’ ಸೀಸನ್-5 ಇದರ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕೋತ್ಸವ ಸಮಾರಂಭ, ಸನ್ಮಾನ ಗೌರವ ಜರಗಲಿದೆ. ಈ ಕಾರ್ಯಕ್ರಮವು ಬೆಳಗ್ಗೆ 9ಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಚರಣ್ ಕುಮಾರ್ ರಾಗದೇವ್ ಇವರಿಂದ ಉದ್ಘಾಟನೆಗೊಳ್ಳಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಉದ್ಯಮಿ ಶ್ರೀ ಲಾಯ್ ನೊರೊನ್ಹಾ, ಮುಂಬೈಯ ವಚನಾ ಹಾಸ್ಪಿಟಾಲಿಟಿ ಸರ್ವೀಸಸ್ ಇದರ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು, ಮತ್ಸ್ಯೋದ್ಯಮಿ ಶ್ರೀ ಮೋಹನ್ ಬೆಂಗ್ರೆ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಖ್ಯಾತ ಗಾಯಕರು ಮತ್ತು ಸಂಗೀತ ನಿರ್ದೇಶಕರಾದ ಶ್ರೀ ಕೆ.ರವಿಶಂಕರ್ ಸುರತ್ಕಲ್, ಖ್ಯಾತ ಗಾಯಕರು ಮತ್ತು ಅಭಿನಯ ಕಲಾವಿದರಾದ ಶ್ರೀ ಯು.ಎಚ್. ಖಾಲಿದ್ ಉಜಿರೆ, ಖ್ಯಾತ ಸಂಗೀತ ಸಂಯೋಜಕರು ಮತ್ತು ಕೀಬೋರ್ಡ್ ವಾದಕರಾದ ಶ್ರೀ ಎಂ. ಜೋನ್ ಪೆರ್ಮನ್ನೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಕನ್ನಡ ಕೋಗಿಲೆ ಖ್ಯಾತಿಯ ವೈ.ಜಿ. ಉಮಾ ಕೋಲಾರ ಮತ್ತು ತಂಡದವರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ಜರುಗಲಿದೆ.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ ಬಯಸಿದ್ದಾರೆ.