ಬೆಂಗಳೂರು : ಸಮುದಾಯ ಬೆಂಗಳೂರು ಪ್ರಸ್ತುತ ಪಡಿಸುವ ಕಾರ್ನಾಡ್ ನೆನಪು ತುಘಲಕ್ 100ರ ಸಂಭ್ರಮ ಎರಡು ದಿನಗಳ ರಂಗೋತ್ಸವ ಕಾರ್ಯಕ್ರಮವು ದಿನಾಂಕ 28-10-2023 ಮತ್ತು 29-10-2023ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ 28-10-2023ರಂದು ಮಧ್ಯಾಹ್ನ 3 ಘಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮುದಾಯ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ವಹಿಸಲಿದ್ದಾರೆ. 4.15ಕ್ಕೆ ರಂಗ ನಿರ್ದೇಶಕರು ಹಾಗೂ ಗಾಯಕರಾದ ಹೆಚ್. ಜನಾರ್ದನ ಮತ್ತು ತಂಡದವರಿಂದ ರಂಗ ಗೀತೆಗಳು ಕಾರ್ಯಕ್ರಮ ನಡೆಯಲಿದೆ. 5ಕ್ಕೆ ಕಾರ್ನಾಡರ ನೆನಪು, 6.45ಕ್ಕೆ ಕಾರ್ನಾಡರ ಸಾಕ್ಷ್ಯ ಚಿತ್ರ ಪ್ರದರ್ಶನ, ಸಂಜೆ ಘಂಟೆ 7.30ಕ್ಕೆ ಶಿವಮೊಗ್ಗದ ಹೊಂಗಿರಣ (ರಿ.) ಪ್ರಸ್ತುತ ಪಡಿಸುವ ಗಿರೀಶ್ ಕಾರ್ನಾಡ್ ರಚನೆ ಹಾಗೂ ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ಚಂದ್ರಶೇಖರ ಶಾಸ್ತ್ರೀ ಅಭಿನಯಿಸುವ ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 29-10-2023ರಂದು ಬೆಳಿಗ್ಗೆ ಘಂಟೆ 10.30ಕ್ಕೆ ಕಾರ್ನಾಡರ ಕೃತಿಗಳು –ಒಳನೋಟ, ಮಧ್ಯಾಹ್ನ 3 ಘಂಟೆಗೆ ‘ರಂಗ ಚಿಂತನ’ ಪುಸ್ತಕ ಬಿಡುಗಡೆ, ಸಂಜೆ 4.15ಕ್ಕೆ ತುಘಲಕ್ 100ರ ನೆನಪು ಅಭಿನಂದನೆ ಹಾಗೂ 6.30ಕ್ಕೆ ಸಮುದಾಯ ಬೆಂಗಳೂರು ಪ್ರಸ್ತುತ ಪಡಿಸುವ ಡಾ. ಸಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನ ಹಾಗೂ ಡಾ. ಶ್ರೀಪಾದ್ ಭಟ್ ಸಹ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡ್ ರಚನೆಯ ‘ತುಘಲಕ್’ ನಾಟಕದ 100ನೇ ಪ್ರದರ್ಶನ ನಡೆಯಲಿದೆ.
ಸಮುದಾಯ ಬೆಂಗಳೂರು :
ಪ್ರದರ್ಶನ ಕಲೆ ಮುಖ್ಯವಾಗಿ ನಾಟಕಗಳ ಮುಖಾಂತರ ನಮ್ಮ ದೈನಂದಿನ ಬದುಕಿನ ಸಮಸ್ಯೆಗಳಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಪ್ರಯೋಗವೇ ಸಮುದಾಯ ಬೆಂಗಳೂರು ತಂಡದ ಪ್ರಾರಂಭ. 1975ರಲ್ಲಿ ಪ್ರಸನ್ನ ನಿರ್ದೇಶನದ ಕೆ.ವಿ. ನಾರಾಯಣ್ ಅವರ ‘ಹುತ್ತವ ಬಡಿದರೆ’ ಎಂಬ ನಾಟಕದಿಂದ ಪ್ರಾರಂಭಗೊಂಡ ಸಮುದಾಯ ಬೆಂಗಳೂರು ತಂಡ, ನಂತರದ ಎರಡು ಮೂರು ವರ್ಷಗಳಲ್ಲಿ ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮುದಾಯ ಘಟಕಗಳು ಪ್ರಾರಂಭವಾಗಲು ಮೂಲ ಪ್ರೇರಕ ಘಟಕವಾಯಿತು. ರಾಜ್ಯದ ಎಲ್ಲಾ ಸಮುದಾಯ ಘಟಕಗಳೂ ರಂಗ ಮತ್ತು ಬೀದಿ ನಾಟಕಗಳ ಪ್ರಯೋಗಗಳ ಮುಖಾಂತರ ಪ್ರಗತಿಪರ ಚಿಂತನೆಗಳ ಅರಿವು ಮೂಡಿಸುವ ಸಾಂಸ್ಕೃತಿಕ ಸಂಘಟನೆಯಾಗಿ ಪ್ರಬಲವಾಗಿ ಮತ್ತು ಗಟ್ಟಯಾಗಿ ಬೆಳೆದು ನಿಂತಿತು. ಬೆಂಗಳೂರಿನಲ್ಲಿ ಮಾಡುವ ರಂಗಪ್ರಯೋಗಗಳು ಹಾಗೂ ಬೀದಿ ನಾಟಕಗಳು ಇತರೇ ಸಮುದಾಯ ಘಟಕಗಳ ಚಟುವಟಕೆಗಳಿಗೆ ಸಹಾಯಕ ಮತ್ತು ಪೂರಕ ಚಟುವಟಕೆಗಳಾಗಿತ್ತು.
ಇಂದು 45 ವರ್ಷಗಳನ್ನು ಕಂಡಿರುವ ‘ಸಮುದಾಯ ಬೆಂಗಳೂರು’ 50ಕ್ಕೂ ಹೆಚ್ಚು ರಂಗ ಪ್ರಯೋಗಗಳನ್ನೂ, 20ಕ್ಕೂ ಹೆಚ್ಚು ಬೀದಿ ನಾಟಕಗಳನ್ನೂ – ಐದು ರಾಜ್ಯವ್ಯಾಪಿ ಸಾಂಸ್ಕೃತಿಕ ಜಾತಾಗಳನ್ನು, ರಂಗಭೂಮಿಯ ಬೆಳವಣಿಗೆಗೆ ಪೂರಕ ಚಿಂತನಗಳು ಹಲವಾರು ವಿಚಾರ ಸಂಕಿರಣಗಳನ್ನೂ ಆಯೋಜಿಸಿ ಭಾಗವಹಿಸಿ ಯಶಸ್ವಿಗೊಳಿಸಿದೆ. ಕಾರ್ಮಿಕರ, ರೈತರ ಸಮಸ್ಯೆಗಳ ಕುರಿತು ಅವರನ್ನೇ ನಟರನ್ನಾಗಿ ಒಳಗೊಂಡು, ಬೀದಿ ನಾಟಕಗಳನ್ನು ಪ್ರದರ್ಶಿಸಿ, ಅವರ ಸಮಸ್ಯೆಗಳಿಗೆ ನ್ಯಾಯವನ್ನು ಒದಗಿಸಿಕೊಟ್ಟಿದೆ. ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕ ವರ್ಗ ಪ್ರೇಕ್ಷಕರಾಗಿ ರಂಗಮಂದಿರಗಳಿಗೆ ಬಂದು, ಹಲವಾರು ಪ್ರಯೋಗಗಳ ಯಶಸ್ವಿ ಪ್ರದರ್ಶನಗಳಿಗೆ ಕಾರಣರಾಗಿದ್ದಾರೆ. ಬಹುಭಾಷಾ ರಾಷ್ಟ್ರೀಯ ಬ್ರೆಕ್ಟ್ ನಾಟಕೋತ್ಸವ ಮತ್ತು ರಾಷ್ಟ್ರೀಯ ಬೀದಿ ನಾಟಕಗಳ ಉತ್ಸವಗಳನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಕೀರ್ತಿ ಸಮುದಾಯ ಬೆಂಗಳೂರಿನದ್ದು. ರಾಷ್ಟ್ರಮಟ್ಟದ ರಂಗ ನಿರ್ದೇಶಕರನ್ನು, ಹಾಗೂ ಸಂಗೀತ ರಂಗ ವಿನ್ಯಾಸ, ಪ್ರಸಾಧನ, ವಸ್ತ್ರ ವಿಜ್ಞಾನ, ಬೆಳಕು ಮತ್ತು ಧ್ವನಿ ವಿನ್ಯಾಸಗಳ ಪ್ರಮುಖರನ್ನು ಒಳಗೊಂಡು ಪ್ರದರ್ಶನಗಳನ್ನು ನೀಡಿದೆ. ರಂಗಭೂಮಿಯ ಸವಾಲುಗಳನ್ನು ಅರ್ಥೈಸುವ ರಂಗ ಚಿಂತನೆ ಸರಣಿ ಕಾರ್ಯಕ್ರಮವನ್ನು ಮಾಡಿದೆ. ಬೆಂಗಳೂರು ಹವ್ಯಾಸಿ ರಂಗಭೂಮಿಯ ಚಟುವಟಕೆಗಳಲ್ಲಿ ಮುಂದಣ ಚಿಂತನೆಗಳನ್ನು ಮಾಡಿ, ಕಾರ್ಯಕ್ರಮಗಳನ್ನು ರೂಪಿಸಿರುವ ಕೀರ್ತಿ ಮತ್ತು ಯಶಸ್ಸು ಸಮುದಾಯ ತಂಡದ್ದು.
ಜಾತಿ , ವರ್ಗ, ಮೂಢನಂಬಿಕೆಗಳ ಆಧಾರಿತ ಈ ಸಮಾಜವನ್ನು ಬದಲಾಯಿಸಿ, ಜಾತಿ, ವರ್ಗ ರಹಿತ ಸಮಾಜ, ಮೂಢನಂಬಿಕೆ ಮತ್ತು ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕೆ ಪೂರಕವಾಗುವ ಆಲೋಚನೆ ಮತ್ತು ಚಿಂತನೆಗಳನ್ನು ನಾಟಕಗಳಲ್ಲಿ ಪ್ರಸ್ತುತ ಪಡಿಸಿ, ಸ್ವಲ್ಪಮಟ್ಟಗಾದರೂ, ಜನ ಸಾಮಾನ್ಯ ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸಿ, ಪ್ರಗತಿಪರ ಚಿಂತನೆಗಳ ಸಂದೇಶ ವಾಹಕರನ್ನಾಗಿಸುವುದೇ ಸಮುದಾಯದ ಗುರಿ. ಈ ನಿಟ್ಟನಲ್ಲಿ ನಿರಂತರ ಪ್ರಯತ್ನ ಮತ್ತು ಪ್ರಯೋಗಗಳೊಂದಿಗೆ ಮುಂದೆ ಸಾಗುತ್ತಿದೆ ಸಮುದಾಯ ಬೆಂಗಳೂರು.