ಬೆಂಗಳೂರು : ‘ಪದ’ ಪ್ರಸ್ತುತ ಪಡಿಸಿದ ‘ಕರ್ನಾಟಕ ಜಾನಪದ ಉತ್ಸವ’ವನ್ನು ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ದಿನಾಂಕ 19-02-2024ರಂದು ಜಾನಪದ ವಿದ್ವಾಂಸರಾದ ಹಿಚಿ ಬೋರಲಿಂಗಯ್ಯನವರು ತಮಟೆ ನುಡಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡುತ್ತಾ “ಜಾನಪದ ಕಲೆ ಜನಪದದಿಂದ ಬಂದಿದ್ದು ಸರಕಾರಗಳು ಈ ಕಲೆಗೆ ಪ್ರೋತ್ಸಾಹ ನೀಡಬೇಕಾದದ್ದು ಅದರ ಕರ್ತವ್ಯ. ಹಿಂದೆ ಸರ್ಕಾರ ಜಾನಪದ ಉತ್ಸವ ಏರ್ಪಡಿಸಿ ಜನಪದ ಕಲಾವಿದರಿಗೆ ವೇದಿಕೆಯನ್ನು ನೀಡುತಿತ್ತು. ಆದರೆ ಇತ್ತೀಚಿಗೆ ಜನಪದ ಕಲಾವಿದರನ್ನು ಮೆರವಣಿಗೆಗೆ ಮಾತ್ರ ಸೀಮಿತಗೊಳಿಸಿ ಅವರನ್ನು ಬೇರೆ ಕಲಾವಿದರಿಗಿಂತ ಕಡಿಮೆ ದರ್ಜೆಯಲ್ಲಿ ಪರಿಗಣಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಷ್ಯನ ಜೀವನದಿ. ಇದಕ್ಕೆ ಸರ್ಕಾರ ಮತ್ತು ಜನಸಾಮಾನ್ಯರು ಪ್ರೋತ್ಸಾಹ ನೀಡಬೇಕಾದದ್ದು ಬಹಳ ಮುಖ್ಯ. ಈ ಸರ್ಕಾರ ಜನಪದ ಕಲಾವಿದರನ್ನು ಮತ್ತು ಜನಪದರನ್ನು ನಿರಂತರವಾಗಿ ನಡೆಸಿಕೊಳ್ಳುತ್ತಿದೆ. ಆದರೆ ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಕರ್ನಾಟಕದಲ್ಲಿ 180ಕ್ಕೂ ಮಿಕ್ಕಿ ಜನಪದ ಕಲೆಗಳಿವೆ. ದೇಶದಲ್ಲಿ ಇಂತಹ ಕಲೆಗಳು ಇರುವುದು ವಿರಳ. ಇಂತಹ ಕಲೆಗಳನ್ನು ಮತ್ತು ಜನಪದ ಕಲಾವಿದರನ್ನು ಶೋಷಿಸಿದೆ ಪ್ರೋತ್ಸಾಹಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ. ಜನಪದ ಕಲೆಯೆಂದರೆ ಕೇವಲ ಒಂದು ವರ್ಗದ ಕಲೆಯಲ್ಲ, ಜನರ ನಾಡಿಮಿಡಿತ ಬಲ್ಲ ಎಲ್ಲ ಜನರ ಕಲೆ. ಇಂತಹ ಕಲೆಗಳನ್ನು ‘ಪದ’ ಸಂಸ್ಥೆ ನಾಟಕ, ಸಂಗೀತ ಮತ್ತು ನೃತ್ಯದ ಮೂಲಕ ಜನರಿಗೆ ಮನರಂಜನೆಯ ಜೊತೆಗೆ ತಾತ್ವಿಕ ನೆಲೆಗಟ್ಟಿನ ಕಾರ್ಯಕ್ರಮವನ್ನು ನಿರಂತರ ಮಾಡುತ್ತಿದೆ. ಹಾಗಾಗಿ ‘ಪದ’ ಸಂಸ್ಥೆಯನ್ನು ಹಾಗೂ ಅದರ ರೂವಾರಿ ಕಾರ್ಯಕರ್ತ ಕಾರ್ಯದರ್ಶಿಗಳಾದ ದೇವರಾಜ್ ಅವರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಅಧ್ಯಕ್ಷ ನುಡಿಯನ್ನು ರಂಗತಜ್ಞ ನರೇಂದ್ರಬಾಬು ಮಾತನಾಡುತ್ತಾ “ನಮ್ಮ ನಾಡಿನ ನಾಡಿಮಿಡಿತವಾದ ಈ ಜನಪದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಸಹಕಾರ ಅತ್ಯಮೂಲ್ಯ. ಸರಕಾರಗಳು ದೇವರಾಜ್ ಅಂತವರನ್ನು ಗುರುತಿಸಬೇಕು. ಇವರ ಕಲೆ, ಸಾಹಿತ್ಯ ಮತ್ತು ಸಂಗೀತ ಬಹಳ ಮುಖ್ಯವಾಗಿದ್ದು, ಇಂದಿನ ಕಾರ್ಯಕ್ರಮ ಯಶಸ್ವಿಯಾಗಲಿ. ಮೂರು ದಿನಗಳ ಕರ್ನಾಟಕ ಜಾನಪದ ಉತ್ಸವ ನಿರಂತರವಾಗಿ ನಾಡಿನ ಎಲ್ಲಾ ಕಡೆ ಪಸರಿಸಲಿ. ಕಲಾವಿದರಿಗೆ ಕಲೆ ಆಧಾರ, ಅದನ್ನು ಉಳಿಸಿ ಬೆಳೆಸಲು ಸರಕಾರಗಳು ಪಣತೊಡಲಿ. ಈ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತಿಹೆಚ್ಚಿನ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಸನ್ಮಾನ್ಯರು, ಸಂಬಂಧ ಪಟ್ಟವರು ಸರ್ಕಾರಕ್ಕೆ ಮನವಿ ಮಾಡಲಿ. ಪ್ರಾಧಿಕಾರ ಅಕಾಡೆಮಿಗಳು ಬೇಗ ಪ್ರಾರಂಭಗೊಂಡು ಅಧಿಕಾರ ಸ್ವೀಕಾರಗೊಂಡು ಕಲೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡಲಿ” ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಪ್ರೊಫೆಸರ್ ಭಾರತಿ ಎಂ.ಪಿ. ಇವರು ನಿರೂಪಿಸಿದರು ಹಾಗೂ ಪದ ಸಂಸ್ಥೆಯ ಕಾರ್ಯದರ್ಶಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಸ್ತುತಗೊಂಡ ಕರ್ನಾಟಕ ಜಾನಪದ ನಾಟಕ ‘ಸಾಕ್ಷಿ ಕಲ್ಲು’ನ್ನು ಹಿರಿಯ ರಂಗಜೀವಿ ಜಾನಪದ ಜಂಗಮ ಗೊ.ರು. ಚನ್ನಬಸಪ್ಪ ಗುದ್ದಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ನಾಟಕವನ್ನು ವೀಕ್ಷಿಸಿದ್ದು ಅವಿಸ್ಮರಣೀಯ. ರಾಮಮೂರ್ತಿ ಆರ್. ನಾಟಕವನ್ನು ನಿರ್ದೇಶಿಸಿದ್ದರು. ನಾಟಕ ‘ಸಾಕ್ಷಿ ಕಲ್ಲು’ ಗೆಲುವಿಗೆ ಜನರ ಮನಸ್ಸು ಸಾಕ್ಷಿಯಾಗಿತ್ತು.