ಮೈಸೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಇದರ ಸಹಯೋಗದಲ್ಲಿ ಆಯೋಜಿಸಿದ 2024ನೇ ಸಾಲಿನ `ಗೌರವ ಪ್ರಶಸ್ತಿ’ ಮತ್ತು ‘ಪುಸ್ತಕ ಪುರಸ್ಕಾರ’ ಕಾರ್ಯಕ್ರಮವು ದಿನಾಂಕ 23 ಮಾರ್ಚ್ 2025ರ ರವಿವಾರದಂದು ಮೈಸೂರಿನ ಕೊಂಕಣ್ ಭವನದಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಚಾಮರಾಜನಗರದ ಶಾಸಕರಾದ ಹರೀಶ್ ಗೌಡ ಮಾತನಾಡಿ “ಕೊಂಕಣಿ ಭಾಷೆಯ ಸಾಹಿತ್ಯ, ಕಲೆ ಇನ್ನೂ ಬೆಳೆಯಲಿ. ಕೊಂಕಣಿ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಕೊಡುವಲ್ಲಿ ಸರಕಾರಕ್ಕೆ ಮನವಿ ಮಾಡಲಾಗುವುದು. ಕೊಂಕಣಿ ಭಾಷೆ ಉಳಿಸಲು ಸಹಕಾರ ನೀಡಲಾಗುವುದು” ಎಂದರು.
ಕಥೆ, ಕಾದಂಬರಿ, ಕವನಗಳನ್ನು ಬರೆದು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೆಟ್ರಿಕ್ ಕಾಮಿಲ್ ಮೋರಾಸ್, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜೋಯೆಲ್ ಪಿರೇರಾ, ಸಾಂಸ್ಕೃತಿಕ ಕ್ಷೇತ್ರದ ಸಾಧಕಿ ಸೊಬೀನಾ ಮೋತೇಶ್ ಕಾಂಬ್ರೆಕರ್ ಇವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಫೆಲ್ಸಿ ಲೋಬೋ ಅವರ ‘ಪಾಲ್ವಾಪೋಂತ್ ಕವಿತಾ’ ಪುಸ್ತಕಕ್ಕೆ ಹಾಗೂ ವಲೇರಿಯನ್ ಸಿಕ್ಕೇರಾ ಇವರ ‘ಶೆತಾಂ ಭಾಟಾಂ ತೊಟಾಂನಿ’ ಲೇಖನ ಪುಸ್ತಕಕ್ಕೆ ಪುಸ್ತಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ವಲೇರಿಯನ್ ಡಿ’ಸೋಜಾ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಜೋನ್ ಡಿ’ಸೋಜಾ, ಕಾರ್ಯದರ್ಶಿ ಜೋಯ್ಸ್ ಸಿಲ್ವೇರಾ, ಅಕಾಡೆಮಿ ಸದಸ್ಯರಾದ ನವೀನ್ ಲೋಬೋ, ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡೇಕರ್, ಅಕ್ಷತಾ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಆಲ್ವಾರಿಸ್ ಪ್ರಸ್ತಾವಿಸಿವಾಗಿ ಮಾತನಾಡಿ ಸ್ವಾಗತಿಸಿ, ಅಕಾಡೆಮಿಯ ಸದಸ್ಯೆ ಸಪ್ನ ಕ್ರಾಸ್ತಾ ನಿರೂಪಿಸಿ, ಜೋನ್ ಡಿ’ಸೋಜಾ ವಂದಿಸಿದರು.