ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯು ದಿನಾಂಕ 24 ಜುಲೈ 2025ರ ಗುರುವಾರ 2025-26ನೇ ಸಾಲಿನ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’, ‘ವಾರ್ಷಿಕ ಪ್ರಶಸ್ತಿ’ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.
ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಮೂಲದ ಹೆಸರಾಂತ ರಂಗವಿನ್ಯಾಸಕ ಶಶಿಧರ ಅಡಪ, ರಂಗಭೂಮಿ ಸಾಧಕ ಗದಗ ಮೂಲದ ಮಾಲತೇಶ ಬಡಿಗೇರ, ರಂಗ ಸಂಘಟಕ ಬೆಂಗಳೂರಿನ ಟಿ. ರಘು, ರಂಗ ವಿಮರ್ಶಕ ಜಿ. ಎನ್. ಮೋಹನ್ ಇವರು ಆಯ್ಕೆ ಆಗಿದ್ದಾರೆ. ಪ್ರಶಸ್ತಿ ತಲಾ 50 ಸಾವಿರ ರೂಪಾಯಿ ನಗದು ಹೊಂದಿದೆ.
ಅಕಾಡೆಮಿ ಅಧ್ಯಕ್ಷ ರಾದ ಕೆ. ವಿ.ನಾಗರಾಜ ಮೂರ್ತಿ ಮಾತನಾಡಿ “ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿ ಸಹಿತ ಒಟ್ಟು 33 ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಗೌರವ ಪ್ರಶಸ್ತಿ 25 ಸಾವಿರ ರೂಪಾಯಿ ಮತ್ತು ದತ್ತಿ ಪ್ರಶಸ್ತಿ 15 ಸಾವಿರ ರೂಪಾಯಿ ಮತ್ತು ಸ್ಮರಣ ಫಲಕವನ್ನು ಒಳಗೊಂಡಿದೆ. ಶೀಘ್ರದಲ್ಲೇ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ಸಾಧಕರನ್ನು ಸಮ್ಮಾನಿಸಲಾಗುವುದು” ಎಂದು ತಿಳಿಸಿದರು. ಈ ವೇಳೆ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ, ಅಕಾಡೆಮಿ ಸದಸ್ಯ ಜಿ. ಪಿ. ಒ. ಚಂದ್ರು, ಲವಕುಮಾರ್, ರವೀಂದ್ರನಾಥ್ ಸೇರಿದಂತೆ ಮತ್ತಿತರರು ಇದ್ದರು.
ವಾರ್ಷಿಕ ಪ್ರಶಸ್ತಿಗೆ ವೆಂಕಟಾಚಲ (ಬೆಂಗಳೂರು), ಮುರ್ತುಜ ಸಾಬ ಘಟ್ಟಿಗನೂರ (ಬಾಗಲಕೋಟೆ), ಚೆನ್ನಕೇಶವಮೂರ್ತಿ ಎಂ. (ಬೆಂಗಳೂರು), ಗೋಪಾಲ ಯಲ್ಲಪ್ಪ ಉಣಕಲ್ (ಹುಬ್ಬಳ್ಳಿ – ಧಾರವಾಡ), ಚಿಕ್ಕಪ್ಪಯ್ಯ (ತುಮಕೂರು), ದೇವರಾಜ ಹಲಗೇರಿ (ಕೊಪ್ಪಳ), ಡಾ. ವೈ. ಎಸ್. ಸಿದ್ದರಾಮೇಗೌಡ (ಬೆಂಗಳೂರು ದಕ್ಷಿಣ), ಅರುಣ್ ಕುಮಾರ್ ಆರ್. ಟಿ. (ದಾವಣಗೆರೆ), ರೋಹಿಣಿ ರಘುನಂದನ್ (ಬೆಂಗಳೂರು), ರತ್ನ ಸಕಲೇಶಪುರ (ಹಾಸನ), ವಿ. ಎನ್. ಅಶ್ವತ್(ಬೆಂಗಳೂರು), ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಸೇಡಂ (ಕಲಬುರಗಿ), ಕೆ. ಆರ್. ಪೂರ್ಣೇಂದ್ರ ಶೇಖರ್ (ಬೆಂಗಳೂರು), ಭೀಮನಗೌಡ ಬಿ. ಕಟಾವಿ ( ಬೆಳಗಾವಿ), ಕೆ. ಮುರಳಿ ( ಕೋಲಾರ), ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ), ಮಲ್ಲೇಶ್ ಬಿ. ಕೋನಾಳ (ಯಾದಗಿರಿ), ಸುಗಂಧಿ ಉಮೇಶ್ ಕಲ್ಮಾಡಿ (ಉಡುಪಿ), ಮಹೇಶ ವಿ. ಪಾಟೀಲ (ಬೀದರ್), ಶಿವಪುತ್ರಪ್ಪ ಶಿವಸಿಂಪಿ(ಕೊಪ್ಪಳ), ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ) ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ನಾಟಕ ಅಕಾಡೆಮಿ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿತ್ತು. ಆದರೆ ಅವರು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹಾಗಾಗಿ ಆ ಪ್ರಶಸ್ತಿ ಬಾಕಿ ಉಳಿದಿತ್ತು. ಬಾಕಿ ಉಳಿದಿದ್ದ ಈ ಪ್ರಶಸ್ತಿಗೆ ಉತ್ತರ ಕನ್ನಡದ ರಂಗಭೂಮಿ ಕಲಾವಿದ ಶಂಕರ್ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ರಂಗಭೂಮಿ ಕ್ಷೇತ್ರದ ಕೊಡುಗೆ ಗಮನಿಸಿ, ರಂಗಸಾಧಕ ಶಂಕರ್ ಭಟ್ ಅವರನ್ನು ಅಕಾಡೆಮಿ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅಕಾಡೆಮಿಯ ದತ್ತಿನಿಧಿ ಪ್ರಶಸ್ತಿಗೆ ಏಳು ಮಂದಿ ಆಯ್ಕೆಯಾಗಿದ್ದಾರೆ. ‘ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ’ಕ್ಕೆ ಮಂಜಪ್ಪ ಪಿ. ಎ. (ಮಂಜು ಕೊಡಗು), ‘ ಬಿ. ಆರ್. ಅರಿಶಿಣಕೋಡಿ ದತ್ತಿ ಪುರಸ್ಕಾರ’ಕ್ಕೆ ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ), ‘ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ’ಕ್ಕೆ ಸಿ. ವಿ. ಲೋಕೇಶ್ (ದೊಡ್ಡಬಳ್ಳಾಪುರ), ‘ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ’ಕ್ಕೆ ಎಚ್. ಪಿ. ಈಶ್ವರಾಚಾರಿ (ಮಂಡ್ಯ), ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ದೊಡ್ಡಮನೆ ವೆಂಕಟೇಶ್ (ಬೆಂಗಳೂರು), ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ’ಕ್ಕೆ ಪಿ. ವಿ. ಕೃಷ್ಣಪ್ಪ (ಬೆಂಗಳೂರು) ಹಾಗೂ ‘ಕಲ್ಬರ್ಡ್ ಕಮಿಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ನಾಗೇಂದ್ರ (ಬೆಂಗಳೂರು) ಆಯ್ಕೆಯಾಗಿದ್ದಾರೆ.
Subscribe to Updates
Get the latest creative news from FooBar about art, design and business.