ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಶ್ರೀ ಅಲ್ಲಮಪ್ರಭು ಸಿದ್ಧಸಂಸ್ಥಾನಮಠ ಇಲ್ಲಿನ ಗಡಿಕನ್ನಡಿಗರ ಬಳಗ ಆಯೋಜಿಸುವ ಕರ್ನಾಟಕ ರಾಜ್ಯೋತ್ಸವ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02-11-2023ರ ಗುರುವಾರ ಬೆಳಗ್ಗೆ ಘಂಟೆ 10.00ಕ್ಕೆ ಚಿಂಚಣಿಯ ಕನ್ನಡ ಭವನದಲ್ಲಿ ನಡೆಯಲಿದೆ.
ಚಿಂಚಣಿ ಸಿದ್ಧಸಂಸ್ಥಾನಮಠದ ಪರಮ ಪೂಜ್ಯಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾಗಿರುವ ಶ್ರೀ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ. ಚಿಕ್ಕೋಡಿಯ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ ಇವರು ಲೇಖಕ ಎಲ್. ಎಸ್. ಶಾಸ್ತ್ರಿಯವರ ಕನ್ನಡ-ಮರಾಠಿ ಸ್ನೇಹಸೇತು ‘ಕೃ. ಶಿ. ಹೆಗಡೆ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ವಿಭೂಷಿತ ಹಿರಿಯ ರಂಗಭೂಮಿ ನಟಿ ಮಾತಾಶ್ರೀ ಮಂಜಮ್ಮ ಜೋಗತಿ ಭಾಗವಹಿಸಲಿಲಿರುವರು. ಇದೇ ಸಂದರ್ಭದಲ್ಲಿ ‘ಮರುಳ ಶಂಕರದೇವರು’ ಬೃಹತ್ ಕಾದಂಬರಿಯ ಕರ್ತೃ ಚಿಕ್ಕೋಡಿಯ ಡಾ. ದಯಾನಂದ ನೂಲಿ ಇವರನ್ನು ಸನ್ಮಾನಿಸಲಾಗುವುದು.
ಕೃ. ಶಿ. ಹೆಗಡೆ
ಕೃಷ್ಣ ಶಿವರಾಮ ಹೆಗಡೆ ಮೂಲತ: ಹೊನ್ನಾವರ ತಾಲುಕಿನ ಸಾಲಕೋಡ ಗ್ರಾಮದ ಹತ್ತಿರದವರು. ಕುಮಟಾ ಕೆನರಾ ಕಾಲೇಜಿನಲ್ಲಿ ಬಿ. ಎ. ಮುಗಿಸಿ ಬರಿಗೈಯಲ್ಲಿ ಮುಂಬಯಿಗೆ ಹೋದ ಅವರು ಸಾಹಸದಿಂದ ಮೇಲೆದ್ದು ಬಂದು ಮಹಾರಾಷ್ಟ್ರ ಸರಕಾರದ ಶಿಕ್ಷಣ ಇಲಾಖೆಯ ಉನ್ನತ ಸ್ಥಾನಕ್ಕೇರಿದರಲ್ಲದೆ ಕನ್ನಡ ಸಹಿತ ಎಂಟು ಭಾಷೆಗಳ ಪಠ್ಯಪುಸ್ತಕ ರಚನಾ ವಿಭಾಗದ ಮುಖ್ಯಸ್ಥರಾಗಿ ಅಗಾಧ ಕೆಲಸ ಮಾಡಿದವರು. ಕರ್ನಾಟಕದ ಕನ್ನಡ ಪಠ್ಯಪುಸ್ತಕಗಳಿಗಿಂತ ಮಹಾರಾಷ್ಟ್ರದ ಕನ್ನಡ ಪುಠ್ಯಪುಸ್ತಕಗಳು ಉತ್ತಮವಾಗಿವೆಯೆಂದು ಸಿಂಪಿ ಲಿಂಗಣ್ಣ , ಹಾ.ಮಾ. ನಾಯಕ, ನಾ. ಡಿಸೋಜಾ ಮೊದಲಾದವರಿಂದ ಮೆಚ್ಚುಗೆ ಪಡೆದವರು. ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹವರ್ಧನ ಸಂಘ ಸ್ಥಾಪಿಸಿ ಉಭಯ ಭಾಷಿಕರ ನಡುವಿನ ಸ್ನೇಹಸೇತುವಾಗಿ ಅಪೂರ್ವ ಸೇವೆ ಸಲ್ಲಿಸಿದವರು.
ಈ ಕಾರ್ಯಕ್ರಮಕ್ಕೆ ಚಿಂಚಣಿಯ ಶ್ರೀ ಅಲ್ಲಮಪ್ರಭು ಸಿದ್ಧಸಂಸ್ಥಾನಮಠ ಇದರ ಗಡಿಕನ್ನಡಿಗರ ಬಳಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ವರ ಸ್ವಾಗತ ಬಯಸಿದ್ದಾರೆ.