ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ದತ್ತಿ ಉಪನ್ಯಾಸ ಮತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 22-07-2023ರಂದು ನಡೆಯಿತು.
ಈ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಪುರುಷೋತ್ತಮ ಪೂಂಜ ವಿರಚಿತ ಪ್ರಸಂಗ ‘ಉಲೂಪಿ ವಿವಾಹ’ ಯಕ್ಷಗಾನ ತಾಳಮದ್ದಳೆಯು ನಡೆಯಿತು. ಸರ್ವಶ್ರೀಗಳಾದ ಗೋಪಾಲಕೃಷ್ಣ ಭಟ್ ಪುಂಡಿಕಾಯಿ, ಟಿ.ಡಿ. ಗೋಪಾಲಕೃಷ್ಣ ಭಟ್ ಪುತ್ತೂರು ಮತ್ತು ಮಾ.ಅದ್ವೈತ್ ಕನ್ಯಾನ ಇವರು ಹಿಮ್ಮೇಳದಲ್ಲಿ ಹಾಗೂ ಸರ್ವಶ್ರೀಗಳಾದ ಶಂಭು ಶರ್ಮ ವಿಟ್ಲ, ಜಯರಾಮ್ ಭಟ್ ದೇವಸ್ಯ, ರಾಜಗೋಪಾಲ ಕನ್ಯಾನ ಅರ್ಥದಾರಿಗಳಾಗಿ ಸಹಕರಿಸಿದರು.
ಡಾ. ಜಾನಕಿ ಸುಂದರೇಶ್ ಸ್ಥಾಪಿತ ಕಳಸ ಪುಟ್ಟದೇವರಯ್ಯ ನಾಗಮ್ಮ ದತ್ತಿ ಉಪನ್ಯಾಸದಲ್ಲಿ ಕವಯತ್ರಿ ಮತ್ತು ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಗೀತಾ ಕೊಂಕೋಡಿಯವರು ದತ್ತಿ ಉಪನ್ಯಾಸ ನೀಡುತ್ತಾ “ಕಾದಂಬರಿಗಾರ್ತಿ ಗಂಗಾ ಪಾದೆಕಲ್ಲು ಅವರ ‘ಮೌನ ರಾಗಗಳು’ ಎಂಬ ಕಾದಂಬರಿ ಸ್ತ್ರೀಯ ಬದುಕಿನ ನೈಜ ಚಿತ್ರಣವನ್ನು ಪ್ರದರ್ಶಿಸಿ, ರೋಗ ರುಜಿನಗಳನ್ನು ಎದುರಿಸಿ ನಿಲ್ಲುವ ಧೈರ್ಯ ಸ್ಥೈರ್ಯವನ್ನು ನೀಡುತ್ತದೆ.” ಎಂದು ಪಾದೆಕಲ್ಲು ಅವರ ಕಾದಂಬರಿಯನ್ನು ಅವಲೋಕಿಸಿ ಮಾತನಾಡಿದರು.
ಡಾ. ಮನಮೋಹನ್ ವಿಟ್ಲ ಸ್ಥಾಪಿತ ಪ್ರೊ. ಎಂ. ರಾಮಕೃಷ್ಣ ಭಟ್ ದತ್ತಿ ಉಪನ್ಯಾಸದಲ್ಲಿ ಯುವ ಕವಿ ಹಾಗೂ ಕನ್ನಡ ಉಪನ್ಯಾಸಕ ಶ್ರೀ ರಮೇಶ್ ಮೆಲ್ಕಾರ್ ಇವರು ‘ಸಂಸ್ಕೃತ ಕನ್ನಡಗಳ ಬಾಂಧವ್ಯ’ ಕುರಿತಾಗಿ ಮಾತನಾಡಿ “ಸುಮಾರು ಐದು ಸಾವಿರ ವರ್ಷಗಳಿಗೂ ಮಿಕ್ಕು ಇತಿಹಾಸವಿರುವ ಸಂಸ್ಕೃತವು ಎಲ್ಲಾ ಭಾಷೆಗಳಿಗೂ ತಾಯಿ ಇದ್ದಂತೆ. ಕನ್ನಡಕ್ಕಂತೂ ಸಂಸ್ಕೃತ ಭಾಷಾ ಎರವಲು ಅನಿವಾರ್ಯವಾದುದು” ಎಂದರು. ರಮಾನಂದ ನೂಜಿಪ್ಪಾಡಿ ದತ್ತಿ ಉಪನ್ಯಾಸ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷರಾದ ಶ್ರೀ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಡಿ.ಬಿ. ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕವಿ, ಪ್ರಾಧ್ಯಾಪಕ ಎಂ.ಡಿ. ಮಂಚಿ ಸ್ವಾಗತಿಸಿ, ನಿರೂಪಿಸಿದರು. ಕವಯತ್ರಿ ರಜನಿ ಚಿಕ್ಕಯ ಮಠ ವಂದಿಸಿದರು.
ಸಂಜೆ ನಡೆದ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷರಾದ ಶ್ರೀ ವಿಶ್ವನಾಥ ಬಂಟ್ವಾಳ ಅವರು ದೀಪ ಬೆಳಗಿ ಉದ್ಘಾಟಿಸಿದರು. ರಾಜಗೋಪಾಲ ಕನ್ಯಾನ ಅವರ ಸಂಪಾದಿತ ಅನುವಾದಿತ ಕೃತಿ ‘ಮಲಯಾಳಿ ವಿಷ ವೈದ್ಯ’ ಹಾಗೂ ಡಾ. ಕೆ.ಟಿ. ರೈ ವಿಟ್ಲ ಮತ್ತು ರಾಜಗೋಪಾಲ ಕನ್ಯಾನ ಜಂಟಿಯಾಗಿ ಸಂಪಾದಿಸಿದ ಕೆದಂಬಾಡಿ ಜತ್ತಪ್ಪ ರೈ ಅವರ ಅನುವಾದಿತ ‘ತುಳು ಗೀತಾಂಜಲಿ’ ಎಂಬ ಕೃತಿಗಳನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಶ್ರೀನಾಥ್ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ “ಬೇರೆ ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಕೃತಿಗಳ ಅನುವಾದ ಇನ್ನಷ್ಟು ಆಗಬೇಕಾಗಿದೆ. ಆಗ ಮಾತ್ರ ಜ್ಞಾನ ವಿಸ್ತಾರವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯಕೀಯ, ವೈಜ್ಞಾನಿಕ ಬರಹಗಳನ್ನು ಭಾಷಾಂತರದ ಮೂಲಕ ಪರಸ್ಪರ ಹಂಚಿಕೊಳ್ಳುವುದರಿಂದ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷಾ ಸಂಬಂಧಗಳ ಬೆಸುಗೆ ಸಾಧ್ಯವಿದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಡಾ. ಅಜಕ್ಕಳ ಗಿರೀಶ್ ಭಟ್ ಇವರು ಕೆದಂಬಾಡಿ ತಿಮ್ಮಪ್ಪ ರೈ ವಿಟ್ಲ ಇವರ ‘ತುಳು ಗೀತಾಂಜಲಿ’ ಕೃತಿ ಹಾಗೂ ಡಾ. ಜೆಡ್ಡು ಗಣಪತಿ ಭಟ್ ಇವರು ‘ಮಲಯಾಳಿ ವಿಷ ವೈದ್ಯ’ ಕೃತಿಯ ಕುರಿತಾಗಿ ಮಾತನಾಡಿದರು. ಕೃತಿಯ ಸಂಪಾದಕ ರಾಜಗೋಪಾಲ ಕನ್ಯಾನ ಕೃತಿ ಪ್ರಕಟಣೆ ಬಗ್ಗೆ ಮಾತನಾಡಿದರು.
ಬಂಟ್ವಾಳ ತಾಲೂಕು ಕ.ಸಾ.ಪ.ದ ಸಂಘಟನಾ ಕಾರ್ಯದರ್ಶಿ ಶ್ರೀ ಜಯರಾಮ ಪಡ್ರೆ ಸ್ವಾಗತಿಸಿ, ಇನ್ನೋರ್ವ ಸಂಘಟನಾ ಕಾರ್ಯದರ್ಶಿ ಶ್ರೀ ದಾಮೋದರ ಏರ್ಯ ವಂದಿಸಿ, ಗೌರವ ಕೋಶಾಧ್ಯಕ್ಷ ಅಬ್ದುಲ್ ರಹಿಮಾನ್ ಡಿ.ಬಿ. ನಿರೂಪಿಸಿದರು. ಅಬೂಬಕ್ಕರ್ ಅಮ್ಮುಂಜೆ ನಾಡಗೀತೆ ಹಾಡಿದರು.