ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಕುವೆಂಪು ಸಭಾಂಗಣದಲ್ಲಿ ದಿನಾಂಕ 31-01-2024ರಂದು 128ನೆಯ ಬೇಂದ್ರೆ ಜನ್ಮದಿನದ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿಯವರು ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಧಾರವಾಡದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದಿತ್ತು. ಅದಕ್ಕೆ ಬಂದ ಜನ ಕಡಿಮೆ ಎಂದು ಯಾರೋ ವ್ಯಾಖ್ಯಾನಿಸಿದಾಗ ಬೇಂದ್ರೆ ‘ಇದು ಲಕ್ಷ ಮಂದಿ ಸೇರೊ ಕಾರ್ಯಕ್ರಮವಲ್ಲ ಲಕ್ಷ್ಯ ಕೊಟ್ಟು ಕೇಳೋ ಮಂದಿ ಇರೋ ಕಾರ್ಯಕ್ರಮ’ ಎಂದಿದ್ದರು. ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರನ್ನು ಕರೆ ತರುವ ಹೊಣೆ ತಮ್ಮದಾಗಿತ್ತು ಎಂದು ನೆನಪಿಸಿಕೊಂಡ ಅವರು ಅವತ್ತಿನ ಬೇಂದ್ರೆ ಉಪನ್ಯಾಸದ ಪ್ರತಿ ಪದವೂ ತಮ್ಮ ನೆನಪಿನಲ್ಲಿ ಉಳಿದಿದ್ದು ಅದನ್ನು ಕೇಳಿ ಕಣ್ಣೀರಿಡದ ಸಭಿಕರೇ ಇರಲಿಲ್ಲ ಎಂದು ನೆನಪು ಮಾಡಿಕೊಂಡರು. ಈ ರೀತಿಯಲ್ಲಿ ಬೇಂದ್ರೆಯವರನ್ನು ‘ಮನಸುಖರಾಯ’ ಎಂದು ಕರೆದ ನಾಡೋಜ ಮಹೇಶ ಜೋಶಿ. ಅವರು ಈ ಜಗತ್ತಿನಲ್ಲಿದ್ದರೂ ಅದನ್ನು ಮೀರಿದ್ದರು ಎಂದು ಹೇಳಿ ಬದುಕಿನಲ್ಲಿ ಮೂಲ ಪ್ರೇಮವನ್ನು ಹಿಡಿದ ಅವರನ್ನು ‘ಒಲವಿನ ವೇದಾಂತಿ’ ಎಂದು ಕರೆದರು.
ಬೇಂದ್ರೆಯವರು ಒಂದು ರೀತಿಯಲ್ಲಿ ಹುಟ್ಟು ಕವಿ. ಅವರ ಮಾತೇ ಕಾವ್ಯದ ಪ್ರವಾಹದಂತೆ ಇರುತ್ತಿತ್ತು. ‘ಗರಿ’ ಸಂಕಲನದಲ್ಲಿನ ‘ನರಬಲಿ’ ಕವಿತೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸೆರೆವಾಸವನ್ನೂ ಕೂಡ ಅವರು ಅನುಭವಿಸಿದ್ದರು. ಇಹ ಮತ್ತು ಪರ ಎರಡೂ ನೆಲೆಯ ಕವಿತೆಗಳನ್ನು ಬರೆದ ಬೇಂದ್ರೆ ರಂಗಭೂಮಿ, ಚಲನಚಿತ್ರದ ಬಗೆಗೂ ಆಸಕ್ತಿಯನ್ನು ಇಟ್ಟುಕೊಂಡಿದ್ದರು. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಅವರ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಬಂದರೆ ‘ನಾಕುತಂತಿ’ ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾಗಿತ್ತು. ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾದ ಅಂಬಿಕಾ ತನಯ ದತ್ತರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಮಹನೀಯರಲ್ಲಿ ಪ್ರಮುಖರು. 1934ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಸಂತೋತ್ಸವದಲ್ಲಿ ಬೇಂದ್ರೆಯವರು ನೀಡಿದ ಉಪನ್ಯಾಸ ಇವತ್ತಿಗೂ ಚಾರಿತ್ರಿಕ ಎಂದು ಪರಿಗಣಿತವಾಗಿದೆ. ಕುವೆಂಪು ಸಭಾಂಗಣದಲ್ಲಿ ಬೇಂದ್ರೆ ಕಾರ್ಯಕ್ರಮ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ. ಅವಧೂತರಂತೆಯೇ ಇದ್ದ ಬೇಂದ್ರೆ ತಮ್ಮನ್ನು ಶರೀಫಜ್ಜನ ಗುರು ಗೋವಿಂದ ಭಟ್ಟರ ಮರಿ ಮೊಮ್ಮೊಗ ಎಂದೇ ಕರೆಯುತ್ತಿದ್ದರು. ಬಡತನದಲ್ಲಿಯೇ ಬೆಳೆದರೂ ಬೇಂದ್ರೆ ಬದುಕನ್ನು ಅಪ್ಪಟವಾಗಿ ಪ್ರೀತಿಸಿ ‘ಬಡನೂರು ವರುಷನ ಹರುಷಾದಿ ಕಳೆಯೋಣ’ ಎಂದು ಭರವಸೆಯ ಮಾತುಗಳನ್ನು ಆಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಚಿಂತಕ ಡಾ. ಬಸವರಾಜ ಸಬರದ ಅವರು “ಬೇಂದ್ರೆಯವರು ಯುಗದ ಕವಿ, ಬೇಂದ್ರೆಯವರ ಕಾವ್ಯ ವಾಚ್ಯಾರ್ಥಗಳನ್ನು ಮೀರಿದ್ದು. ಅಲ್ಲಮನಂತೆ ಅರ್ಥವನ್ನು ದಾಟಿ ಅನುಭಾವವನ್ನು ತಲುಪಿದ್ದು, ಅವರ ಒಂದೊಂದು ಕವಿತೆಯ ಕುರಿತು ಒಂದೊಂದು ಪುಸ್ತಕ ಬರೆಯಬಹುದು ಎಂದು ಹೇಳಿ ಬೇಂದ್ರೆಯವರು ಯಾವತ್ತೂ ಏನನ್ನೂ ಕೇಳಿದವರಲ್ಲ. ಈಗ ಬೇಂದ್ರೆ ಟ್ರಸ್ಟ್ ಕೂಡ ಹಣದ ಕೊರತೆಯಿಂದ ನರಳುತ್ತಿದೆ. ಸರ್ಕಾರ ಇದರ ಕುರಿತು ಗಮನ ಹರಿಸಬೇಕು” ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಬರಹಗಾರ್ತಿ ಬೇಂದ್ರೆ ಕಾವ್ಯದ ಕುರಿತು ವಿಶೇಷ ಅಧ್ಯಯನ ಮಾಡಿದವರೂ ಆದ ಡಾ. ಗೀತಾ ವಸಂತ “ಬೇಂದ್ರೆ ಹುಟ್ಟು ಸಾವು ಮೀರಿದ ಪ್ರಜ್ಞೆಯ ನಿರಂತರ ಪ್ರವಾಹದ ವಿಶೇಷ ಚೇತನ, ಅವರು ಅಪ್ಪಟ ದೇಸಿಯೂ ಹೌದು ಅವಧೂತರೂ ಹೌದು, ಜನವಾಣಿಯನ್ನು ಆತ್ಮವಾಣಿಯಾಗಿಸಿದ ಬೇಂದ್ರೆಯವರ ಕಾವ್ಯದ ಧ್ವನಿಯನ್ನು ಹಿಡಿಯುವುದು ಕಷ್ಟ. ನೋವನ್ನೇ ನುಂಗಿದರೂ ಆನಂದ ಉಣಿಸಿದ ವಿಶೇಷ ಚೇತನ ಅವರು. ಪಟ್ಟ ಪಾಡನ್ನೆಲ್ಲಾ ಹುಟ್ಟು ಹಾಡಾಗಿಸುವ ಬೇಂದ್ರೆ ಬದುಕಿನ ಎಲ್ಲಾ ಅನುಭವಗಳನ್ನೂ ರಸವಾಗಿಸಿದರು. ‘ರಸವೇ ಜನನ – ವಿರಸ ಮರಣ – ಸಮರಸವೇ ಜೀವನ’ ಎನ್ನುವುದು ಅವರ ಚಿಂತನೆಯ ಸಾರ. ಅಗಾಧವಾದ ಕಡಲನ್ನು ಬೊಗಸೆಯಲ್ಲಿ ಹಿಡಿಯುವುದು ಎಷ್ಟು ಕಷ್ಟವೋ ಬೇಂದ್ರೆಯವರ ಕಾವ್ಯದ ಕುರಿತು ಮಾತನಾಡುವುದೂ ಅಷ್ಟೇ ಕಷ್ಟ. ವಿಶ್ವ ಮೂಲದ ರೂಪಕಗಳನ್ನು ಅವರು ಪಾತಳಿಯಿಂದ ಎತ್ತಿ ಕಾವ್ಯದಲ್ಲಿ ಹಿಡಿದಿದ್ದಾರೆ. ತಮ್ಮನ್ನು ಐದು ಐದೆಯರ ಮಗ ಎಂದು ಕರೆದುಕೊಂಡ ಅವರು ಕರಳು ಬಳ್ಳಿಯ ಸೊಲ್ಲನ್ನು ಆಲಿಸಿದವರು. ವಿಶ್ವದ ಜೊತೆಗಿನ ನಮ್ಮ ಹೊಕ್ಕಳ ಬಳ್ಳಿಯ ಸಂಬಂಧವನ್ನು ಗುರುತಿಸಿದ ಬೇಂದ್ರೆ ಅನುಭವದ ನೆಲೆಯನ್ನು ಅನುಭಾವಕ್ಕೆ ಹಿಗ್ಗಿಸಿದರು. ಬೇಂದ್ರೆ ಕಾವ್ಯದಲ್ಲಿ ನರ್ತನದ ಗುಂಗು ಮತ್ತು ಅನುಭಾವದ ಹಿಗ್ಗು ಮೇಳೈಸಿದೆ ಇಡೀ ಬ್ರಹ್ಮಾಂಡವೇ ಅವರ ಪಾಲಿಗೆ ಸಿಂಫೋನಿಯಂತೆ ಇತ್ತು. ನೋಟ ಬೇರೆ ಕಾಣುವುದು ಬೇರೆ ಎಂದು ಬೇಂದ್ರೆ ಗುರುತಿಸಿದ್ದರು” ಎಂದು ಹೇಳಿದರು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಅವರು ನಿರೂಪಿಸಿದರೆ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಸ್ವಾಗತ ಕೋರಿದರು. ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು. ಅನೇಕ ಬೇಂದ್ರೆ ಅಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.