ಬೆಂಗಳೂರು: ದೇಶಹಳ್ಳಿ ಜಿ.ನಾರಾಯಣ ಇವರ 100ನೆಯ ಜನ್ಮದಿನದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 02-09-2023 ರಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಇವರು “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣೀಕರ್ತರಾಗಿ, ಪರಿಷತ್ತಿನಲ್ಲಿ ಒಂದು ಹೊಸ ಶಕೆ ಪ್ರಾರಂಭಿಸಿದವರು ದೇಶಹಳ್ಳಿ ಜಿ.ನಾರಾಯಣರು. 1969 ರಿಂದ 1978ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀಯುತರು ಕನ್ನಡ ನಾಡು ನುಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದರು. ಇವರು 1942ರಲ್ಲಿ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿʼ ಭಾಗವಹಿಸಿ ಸೆರೆಮನೆ ಸೇರಿದ್ದರು. 1957ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ನಾರಾಯಣ ಅವರು 1964ರಲ್ಲಿ ಬೆಂಗಳೂರಿನ ಮೇಯರಾಗಿ ಸೇವೆ ಸಲ್ಲಿಸಿದವರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು ನಿರಂತರ ಕನ್ನಡ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಹಾಸ್ಯ ಭರಿತ ಮಾತುಗಳಂದ ಜನರನ್ನು ಸೇರಿಸುವ ಮೂಲಕ ಮಹಾನ್ ಸಂಘಟಕರಾಗಿದ್ದರು.”ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಮಾತನಾಡಿ “ಶ್ರೇಷ್ಠ ಸಂಘಟಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಜಿ.ನಾರಾಯಣರು ಅವರು ಸಾಹಿತಿಗಳು ಮತ್ತು ವಿದ್ವಾಂಸರೂ ಅಲ್ಲದೆ ಸ್ವತಃ ಪತ್ರಕರ್ತರೂ ಆಗಿದ್ದರು. ಪರಿಷತ್ತಿನ ಪ್ರಗತಿ ಕಾರ್ಯಗಳಿಗೆ ವಿನೂತನ ಯೋಜನೆಗಳನ್ನು ರೂಪಿಸಿ ಅದರಂತೆ ಯೋಜನಾಬದ್ಧವಾಗಿ ಕೆಲಸಮಾಡಿ ಹೆಸರಾದವರು. ಅವರ ಕಾಲದಲ್ಲಿ ನಡೆಸಿದ ಬಹುತೇಕ ಕಾರ್ಯಕ್ರಮಗಳಲ್ಲೆಲ್ಲಾ ಐತಿಹಾಸಿಕವಾಗಿದ್ದವು. 1975ನೇ ವರ್ಷವನ್ನು ಯುನೆಸ್ಕೊ ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಿದಾಗ ಪರಿಷತ್ತಿನಲ್ಲಿ 200ಗೋಷ್ಠಿಗಳನ್ನು ನಡೆಸಿ, 25ಮಹಿಳಾ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿ, ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿದ್ದರು”ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಮತ್ತು ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು, ವಿಶೇಷ ಕರ್ತವ್ಯಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನವನ್ನು ಸಲ್ಲಿಸಿದರು.