ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಡಾ.ವಿನಾಯಕ ಕೃಷ್ಣ ಗೋಕಾಕರ 104ನೇ ಜನ್ಮ ದಿನಾಚರಣೆಯು ದಿನಾಂಕ 10-08-2023ರಂದು ನಡೆಯಿತು.
ಗೋಕಾಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಕನ್ನಡ ಸಾಹಿತ್ಯಕ್ಕೆ ಧೀಮಂತಿಕೆ ತಂದು ಕೊಟ್ಟ ಬರಹಗಾರ ಡಾ.ವಿನಾಯಕ ಕೃಷ್ಣ ಗೋಕಾಕರು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಮೊದಲ ಕನ್ನಡಿಗ ಅಧ್ಯಕ್ಷರು. ಜೊತೆಗೆ ಜ್ಞಾನಪೀಠ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮೊದಲ ಕನ್ನಡದ ಅಕ್ಷರ ಸಂತರು. ಡಾ.ವಿನಾಯಕ ಕೃಷ್ಣ ಗೋಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಎತ್ತರದ ವ್ಯಕ್ತಿತ್ವ, ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ನಿಲುವು. ಬಾಹ್ಯ ನೋಟಕ್ಕೆ ಮಾತ್ರವಲ್ಲದೆ ವ್ಯಕ್ತಿತ್ವದಿಂದಲೂ ಗೋಕಾಕರು ಎತ್ತರದ ವ್ಯಕ್ತಿಯಾಗಿದ್ದರು. ಗುರು ಗೋವಿಂದ ಭಟ್ಟರನ್ನು ಹಾಗೂ ಶಿಶುನಾಳ ಶರಿಫರ ಬಗೆಗಿನ ಸಾಕಷ್ಟು ಮಾಹಿತಿಗಳು ಅವರಲ್ಲಿತ್ತು..
ಗೋಕಾಕರಿಗೆ 1960ರಲ್ಲಿ ‘ದ್ಯಾವಾ ಪೃಥವೀ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1961ರಲ್ಲಿ ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ, ‘ಭಾರತ ಸಿಂಧುರಶ್ಮಿ’ ಮಹಾಕಾವ್ಯಕ್ಕೆ 1990ರಲ್ಲಿ ‘ಜ್ಞಾನಪೀಠ ಪುರಸ್ಕಾರ’, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅಮೆರಿಕಾದ ಪೆಸಿಫಿಕ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ, 1958ರಲ್ಲಿ ಬಳ್ಳಾರಿಯಲ್ಲಿ ನಡೆದ 40ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಅನೇಕ ಗೌರವಗಳು ಅವರ ಸಾಹಿತ್ಯ ಕೃಷಿಕೆ ಸಂದ ಗೌರವ. ನೂತನ ಛಂದೋಭಿವ್ಯಕ್ತಿಯ ಪ್ರೇರಣೆ ನವ್ಯರಿಗೆ ನವ್ಯ ಕಾವ್ಯದಲ್ಲಿ ದೊರೆತದ್ದು ಬಹುಷಃ ಗೋಕಾಕರ ʻಸಮುದ್ರ ಗೀತʼಗಳಿಂದಲೇ ಎಂದು ಕಾಣುತ್ತದೆ. ಅವರು ಮುಕ್ತ ಛಂದಸ್ಸಿನಲ್ಲಿ ‘ನವ್ಯ ಕವಿತೆಗಳು’ ಎಂಬ ಸಂಗ್ರಹವನ್ನು ಪ್ರಕಟಿಸಿ, ಮುಂಬೈನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ನವ್ಯ ಕಾವ್ಯದ ಸ್ವರೂಪದ ಬಗ್ಗೆ ಮಾತನಾಡಿದ್ದರು.”ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಗೋಕಾಕರಂತಹ ಹಿರಿಯರು ತಮ್ಮ ‘ಭಾರತ ಸಿಂಧುರಶ್ಮಿ’ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ತಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಕಲ್ಲಿನಂತಿದ್ದ ನನ್ನನ್ನು ಕಡೆದು ವಿಗ್ರಹವಾಗಿಸಿದವರು ಗೋಕಾಕರು. ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಗೋಕಾಕರೇ ಕಾರಣ. ಚಂಪೂಕಾವ್ಯದ ತಂತ್ರವನ್ನು ಹೊಸಗನ್ನಡ ಕವಿತೆಗೆ ಅಳವಡಿಸಲು ಪ್ರಯತ್ನಿಸಿದ್ದಾರೆಂಬುದು ಕುತೂಹಲದ ಸಂಗತಿಯಾಗಿದೆ. ಅವರ ‘ತ್ರಿವಿಕ್ರಮರ ಆಕಾಶಗಂಗೆ’ ಮತ್ತು ‘ಇಂದಲ್ಲ ನಾಳೆ’ ಈ ಎರಡೂ ಹೊಸ ಬಗೆಯ ಚಂಪೂಕಾವ್ಯಗಳೆಂದು ಕರೆಯಲ್ಪಟ್ಟಿವೆ. ಗೋಕಾಕರ ಸಾಹಿತ್ಯವೆಂದರೆ ಪ್ರಯೋಗ ಪ್ರಪಂಚ. ಅದೇ ಅವರ ಸಾಹಿತ್ಯ ನಿರ್ಮಿತಿಯ ಬಹುಪಾಲನ್ನು ಒಳಗೊಳ್ಳುತ್ತದೆ. ಅವರು ಬಹು ಹಿಂದೆಯೇ ಬರೆದ, 1268 ಪುಟಗಳಷ್ಟು ಸುದೀರ್ಘವಾದ ಕಾದಂಬರಿ ‘ಸಮರಸವೇ ಜೀವನ’ ಎನ್ನುವುದು ಬಹುಷಃ ಕನ್ನಡದಲ್ಲಿಯೇ ಬೃಹತ್ ಗಾತ್ರದ ಕೃತಿ. ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆಯನ್ನು ಕುರಿತು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅವರು ಬರೆದ ಕೆಲವು ಕೃತಿಗಳು, ಪಶ್ಚಿಮದ ಕಾವ್ಯ ತತ್ವಗಳ ಗಾಢವಾದ ತಿಳಿವಳಿಕೆಯನ್ನೂ, ಭಾರತೀಯ ಕಾವ್ಯಮೀಮಾಂಸೆ ಹಾಗೂ ಅರವಿಂದರ ವಿಚಾರಧಾರೆಗಳನ್ನೂ ಪ್ರಕಟಿಸುತ್ತವೆ. ಅವರ ‘ಭಾರತ ಸಿಂಧುರಶ್ಮಿ’ ಭಾರತೀಯ ಭಾಷೆಗಳಲ್ಲಿ ಈವರೆಗೆ ನಿರ್ವಹಿತವಾಗದ, ಮತ್ತು ಕನ್ನಡದಲ್ಲಿ ಮೊಟ್ಟ ಮೊದಲಿಗೆ ನಿರ್ಮಿತಿಯಾದ ಒಂದು ಮಹಾಕಾವ್ಯ” ಎಂದು ವಿವರಿಸಿದರು.
ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.