ಸಿದ್ದಾಪುರ : ಕೊಡಗು ಜಿಲ್ಲಾ, ವಿರಾಜಪೇಟೆ ತಾಲೂಕು ಮತ್ತು ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೆನ್ನಯ್ಯನ ಕೋಟೆ ಸರಕಾರಿ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಆಯೋಜಿತ ಸಾಹಿತಿ ದಿ. ಎ.ಎನ್. ರಾಮಕೃಷ್ಣ ಮತ್ತು ದಿ. ಬಿ.ಜಿ. ರಘುನಾಥ್ ನಾಯಕ್ ಜ್ಞಾಪಕಾರ್ಥ ‘ದತ್ತಿನಿಧಿ ಕಾರ್ಯಕ್ರಮ’ವು ಚೆನ್ನಯ್ಯನ ಕೋಟೆ ಸರಕಾರಿ ಪ್ರೌಢ ಶಾಲೆಯಲ್ಲಿ ದಿನಾಂಕ 02-12-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕಿ ಕೆ.ಎ. ಕಾವೇರಮ್ಮ ಮಾತನಾಡಿ “ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯೊಂದಿಗೆ ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ಮುನ್ನಡೆಯಬೇಕು. ಶಾಲೆಗಳಲ್ಲಿ ಇಂತಹ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬಿತ್ತಿ, ಕನ್ನಡ ಸಾಹಿತ್ಯದತ್ತ ಆಸಕ್ತಿ ಮೂಡಿಸುವ ಪ್ರಯತ್ನ ನಡೆಸುತ್ತಿರುವುದು ಮೆಚ್ಚುಗೆಯ ವಿಚಾರ” ಎಂದು ಹೇಳಿದರು.
ಮಾಜಿ ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷರಾದ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, “ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಅಭಿಮಾನದೊಂದಿಗೆ ಕನ್ನಡಪರ ಕಾರ್ಯಕ್ರಮಗಳಿಗೆ ಹೆಚ್ಚು ಸಹಕಾರ ನೀಡುವುದರ ಮೂಲಕ ಕೈಜೋಡಿಸಬೇಕು” ಎಂದು ಹೇಳಿದರು.
ಈ ಸಂದರ್ಭ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಹೆಚ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್, ಪದ್ಮನಾಭ, ಚನ್ನಯ್ಯನಕೋಟೆ ಗ್ರಾ.ಪಂ.ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್, ಪ್ರೌಢ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸಜಿತಾ, ಗ್ರಾಪಂ ಸದಸ್ಯರಾದ ಶೀಲಾ, ವಿಜು, ಪ್ರೌಢಶಾಲಾ ವಿಭಾಗದ ನಾಮನಿರ್ದೇಶಿತ ಸದಸ್ಯ ವೇಣು ಕುಮಾರ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ದಿನೇಶ್, ಯೋಗೇಶ್, ಬಾವ ಮಾಲ್ದಾರೆ ಹಾಗೂ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.