ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2018, 2019, 2020, 2021, 2022 ಹಾಗೂ2023ನೇ ಸಾಲಿನ ʻಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿʼಯನ್ನು ಪ್ರಕಟಿಸಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕಳೆದ 6 ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡದೇ ಇರುವುದರಿಂದ ಈ ಬಾರಿ 6 ಜನ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
2018 ನೇ ಸಾಲಿನ ʻಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿʼ ಪ್ರಶಸ್ತಿಗಾಗಿ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಕೋಲಾರದ ಶ್ರೀ ಕೋಟಿಗಾನಹಳ್ಳಿ ರಾಮಯ್ಯ, 2019ರ ಪ್ರಶಸ್ತಿಗೆ ಕಲಬುರಗಿಯ ಡಾ.ಎಚ್.ಟಿ. ಪೋತೆ, 2020ರ ಪ್ರಶಸ್ತಿಗೆ ವಿಜಯಪುರದ ಶ್ರೀಮತಿ ಇಂದುಮತಿ ಲಮಾಣಿ, 2021ರ ಪ್ರಶಸ್ತಿಗೆ ಬೆಂಗಳೂರಿನ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, 2022ರ ಪ್ರಶಸ್ತಿಗಾಗಿ ಗದಗದ ಡಾ.ಅರ್ಜುನ ಗೊಳಸಂಗಿ ಹಾಗೂ 2023ರ ಪ್ರಶಸ್ತಿಗೆ ಹಾಸನದ ಶ್ರೀ ನಾಗರಾಜ ಹೆತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ .
ಪ್ರಶಸ್ತಿಯ ಬಗ್ಗೆ :
ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಆ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ’ಗಾಗಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿಯನ್ನು ಸ್ಥಾಪಿಸಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವುದು ದತ್ತಿಯ ಮೂಲ ಆಶಯವಾಗಿದೆ. ಪ್ರಸ್ತುತ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲಾ ಸಾಹಿತ್ಯ ಸಾಧಕರಿಗೆ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಆಶಿಸಿ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಕನ್ನಡ ನಾಡಿನಲ್ಲಿ, ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿರುವ ಗಣ್ಯರನ್ನು ಸೂಕ್ಷ್ಮವಾಗಿ ಗುರುತಿಸಿ ಈ ದತ್ತಿ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿ ಕೆಲಸ ಮಾಡಿದೆ.
ಕೊರೋನಾ ಸೇರಿದಂತೆ ಇತರ ಕಾರಣಗಳ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ʻಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿʼಯ ಪ್ರಕಟಣೆ ಬಾಕಿ ಇತ್ತು. ಈ ಪ್ರಶಸ್ತಿಯು ರೂಪಾಯಿ 10,000 (ಹತ್ತು ಸಾವಿರ) ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಇದುವರೆಗೆ ಇಬ್ಬರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಶ್ರೀಮತಿ ರಮಾಕುಮಾರಿ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.