ಕೊಡಗು : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಪರಿಷತ್ತಿನ 109ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ದಿನಾಂಕ 05-05-2023ರಂದು ಸಾಹಿತ್ಯ ಪರಿಷತ್ತಿನ ಸದಸ್ಯೆ ಶ್ರೀಮತಿ ಚೊಕ್ಕಾಡಿ ಪ್ರೇಮ ರಾಘವಯ್ಯ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಮಾತನಾಡುತ್ತಾ “ಕನ್ನಡ ನಾಡು, ನುಡಿ, ಸಂಸ್ಕೃತಿಗಳ ರಕ್ಷಣೆ, ಉಳಿವು ಮತ್ತು ಪರಿಚಯ ಇವುಗಳಿಗಾಗಿ ಸ್ಥಾಪನೆಯಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು 108 ವರ್ಷಗಳ ಹಿಂದೆ 1915ರಲ್ಲಿ ಮೈಸೂರು ಸಂಸ್ಥಾನದ ದೊರೆಗಳಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಿವಾನರುಗಳಾದ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ರವರು ಸ್ಥಾಪಿಸಿದ ಕರ್ನಾಟಕ ಸಾಹಿತ್ಯ ಪರಿಷತ್ತು 1935ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಮರುನಾಮಕರಣಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಲೋಕದ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದೆ. ಹೋಬಳಿ ಮಟ್ಟದಲ್ಲಿಯೂ ಪರಿಷತ್ತಿನ ಘಟಕಗಳನ್ನು ರಚಿಸುವ ಮೂಲಕ ಪ್ರತಿ ಗ್ರಾಮದಲ್ಲೂ ಕನ್ನಡದ ಬೆಳವಣಿಗೆ ಅದರ ಸಂಸ್ಕೃತಿಯ ಉಳಿವು ಅರಿವು ಆಗಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡುತ್ತಾ “ಸಾಹಿತ್ಯ ಪರಿಷತ್ತು ತನ್ನ 108 ವರ್ಷಗಳ ಸುಧೀರ್ಘ ಸೇವೆಯಲ್ಲಿ ಹಲವಾರು ಸಾಹಿತಿ ಕಲಾವಿದರುಗಳ ಕೃತಿ ಬಿಡುಗಡೆ, 3000ಕ್ಕೂ ಹೆಚ್ಚು ದತ್ತಿಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ” ಎಂದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೆ.ಯು. ರಂಜಿತ್, ಶ್ರೀಮತಿ ಕೆ.ಜಿ. ರಮ್ಯ, ಹೆಚ್.ಎಸ್. ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.