ಮಂಗಳೂರು : ದಿನಾಂಕ 05-05-2023ನೇ ಶುಕ್ರವಾರದಂದು ನಗರದ ಬಲ್ಮಠದಲ್ಲಿರುವ ಬಜಾಜ್ ಸುಪ್ರೀಮ್ ಕಛೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್. ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಬಜಾಜ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀ ರಾಘವೇಂದ್ರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು.
“ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಇತಿಹಾಸ ಇದೆ, ಚರಿತ್ರೆ ಇದೆ. ಕ.ಸಾ.ಪ. ಎನ್ನುವುದು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ ಮತ್ತು ಕನ್ನಡದ ಅಸ್ಮಿತೆಯ ದ್ಯೋತಕ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮನೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಆಂಗ್ಲ ಭಾಷೆಯ ಮೋಹದಿಂದ ನಮ್ಮ ಆಡುಭಾಷೆ ಹಾಗೂ ಮಾತೃ ಭಾಷೆಯಾದ ಕನ್ನಡವನ್ನು ಕೀಳಾಗಿ ಕಾಣಬಾರದು. ತಾವು ಕನ್ನಡದಲ್ಲಿ ವ್ಯವಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡದ ಉಳಿಕೆ ಸಾಧ್ಯವಾಗದು. ಪ್ರತಿಯೊಬ್ಬ ಕನ್ನಡಿಗರೂ ಕನ್ನಡದ ರಾಯಭಾರಿಗಳಂತೆ ಕೆಲಸ ಮಾಡಿದಲ್ಲಿ ಮಾತ್ರ ಕನ್ನಡ ಉಳಿಸಲು ಸಾಧ್ಯ” ಎಂದು ಖ್ಯಾತ ಸಾಹಿತಿ ಮತ್ತು ನಿವೃತ್ತ ಪ್ರಾಧ್ಯಾಪಕರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಕ.ಸಾ.ಪ. ದತ್ತಿ ಪ್ರಶಸ್ತಿ ಪಡೆದ ಡಾ. ಮುರಲೀಮೋಹನ್ ಚೂಂತಾರು ಅವರನ್ನು ಸಂಮಾನಿಸಿ ಅಭಿನಂದಿಸಲಾಯಿತು. ಅವರ ದತ್ತಿ ಪ್ರಶಸ್ತಿ ವಿಜೇತ ಕೃತಿ ‘ಸಂಗಾತಿ’ಯ ಬಗ್ಗೆ ಖ್ಯಾತ ವೈದ್ಯರಾದ ಕಿಶನ್ ರಾವ್ ಬಾಳಿಲ ಮಾತನಾಡಿದರು. ಕ.ಸಾ.ಪ. ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಬೆನೆಟ್ ಅಮ್ಮನ್ನ, ಬಿ. ಕೃಷ್ಣಪ್ಪ ನಾಯ್ಕ್ , ಉದಯ ಕುಮಾರ್, ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಮುರಳೀಧರ ಭಾರದ್ವಾಜ್ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಕ.ಸಾ.ಪ. ಮಂಗಳೂರು ಘಟಕದ ಸುಮಾರು 50 ಮಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗೌ. ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಇನ್ನೋರ್ವ ಗೌ. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜಿ. ನಿರೂಪಿಸಿ, ಉಷಾ ಗಣೇಶ್ ಪ್ರಸಾದ್ ನಾಡಗೀತೆಯನ್ನು ಹಾಡಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.