ಮುಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ವತಿಯಿಂದ ದಿನಾಂಕ 05-05-2023ರಂದು ಶುಕ್ರವಾರ ಮುಲ್ಕಿಯ ಸ್ವಾಗತ್ ಹೊಟೇಲು ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡುತ್ತಾ “ಕನ್ನಡ ಶಾಲೆಗಳು ಮುಚ್ಚುತ್ತಿವೆ. ಏಳೆಂಟು ಕನ್ನಡ ಶಾಲೆಗಳನ್ನು ನಡೆಸುತ್ತಿರುವ ನನಗೆ ಕನ್ನಡ ಶಾಲೆಗಳನ್ನು ನಡೆಸುವ ಸವಾಲುಗಳ ಅರಿವಿದೆ. ಸರಕಾರ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ಕೊಡದೆ ಅನ್ಯಾಯ ಮಾಡುತ್ತಿದೆ. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಅಂಗಡಿ ಸಂಸ್ಥೆಗಳ ಫಲಕಗಳು ಇಂಗ್ಲಿಷ್ ಭಾಷೆಗಳಲ್ಲೇ ಇವೆ. ಕನ್ನಡದಲ್ಲಿ ಕಡ್ಡಾಯವಾಗಿದ್ದರೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಬೆಂಗಳೂರಿನವರಲ್ಲದವರು ಅಧ್ಯಕ್ಷರಾಗುವುದು ಸಾಧ್ಯವೇ ಇಲ್ಲ ಎಂಬಂತಿದ್ದ ಸಾಹಿತ್ಯ ಪರಿಷತ್ತಿನಲ್ಲಿ ಮುಲ್ಕಿಯವನಾದ ನಾನು ಅಧ್ಯಕ್ಷನಾದೆ. ಸಾಹಿತ್ಯ ಪರಿಷತ್ತಿನಲ್ಲಿ ಅನೇಕ ಬದಲಾವಣೆಗಳನ್ನು ತಂದೆ. ಲಕ್ಷಾಂತರ ರೂಪಾಯಿಯ ದತ್ತಿನಿಧಿಗಳನ್ನು ಸ್ಥಾಪಿಸಿದೆ. ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದಾಯಕವನ್ನಾಗಿಸಿದೆ. ಸಿಬಂದಿಗಳಲ್ಲಿ ಶಿಸ್ತು ತರುವ ಪ್ರಯತ್ನ ಮಾಡಿದೆ. ವಾಹನ ಶುಲ್ಕ, ಇತರ ಯಾವುದೇ ಭತ್ಯೆ ಪಡೆದಿಲ್ಲ. ಪರಿಷತ್ತು 90 ವರುಷಗಳಲ್ಲಿ 900 ಪುಸ್ತಕಗಳನ್ನು ಪ್ರಕಟಿಸಿತ್ತು. ನನ್ನ ಅವಧಿಯಲ್ಲಿ 1350 ಪುಸ್ತಕ ಪ್ರಕಟಿಸಿದೆ. ಆಮೇಲೆ ಅಧ್ಯಕ್ಷರಾದ ಚಂಪಾ ನನ್ನ ಅವಧಿಯಲ್ಲಿ ಪ್ರಕಟಿಸಿದ ಪುಸ್ತಕಗಳಿಗೆ ತಮ್ಮ ಹೆಸರನ್ನು ಹಾಕಿಸಿಕೊಂಡರು. ಪೋಲೀಸು ತಂದು ಸಮ್ಮೇಳನ ಆಗುತ್ತಿದ್ದ ಪರಿಸ್ಥಿತಿಯನ್ನು ಬದಲಾಯಿಸಿದೆ” ಎಂದು ತನ್ನ ಸಾಹಿತ್ಯ ಪರಿಷತ್ತು ಒಡನಾಟ, ಹೋರಾಟಗಳ ಬಗ್ಗೆ ಮಾತನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿರುವ ಕಸಾಪ ಮಂಗಳೂರು ತಾಲೂಕು ಮಾಜಿ ಅಧ್ಯಕ್ಷ ಸರ್ವೋತ್ತಮ್ ಅಂಚನ್‌ರನ್ನು ಗೌರವಿಸಲಾಯಿತು. ಕಸಾಪ ಮುಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಸದಸ್ಯರಾದ ರಾಜಶೇಖರ್, ವೆಂಕಟೇಶ್ ಹೆಬ್ಬಾರ್, ಅಬ್ದುಲ್ ರಜಾಕ್, ಹೆರಿಕ್ ಪಾಯಸ್, ಧನಲಕ್ಷ್ಮಿ ಶೆಟ್ಟಿಗಾರ್ ಮತ್ತಿತರರಿದ್ದರು.