ಉಪ್ಪಿನಂಗಡಿ : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಬಜತ್ತೂರು ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಮಹಾಪೋಷಕತ್ವದಲ್ಲಿ ಬಜತ್ತೂರು ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಸಾಹಿತ್ಯದ ನಡೆ ಗ್ರಾಮದ ಕಡೆ ಅಭಿಯಾನದಂಗವಾಗಿ ‘ಗ್ರಾಮ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ದಿನಾಂಕ 25-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಗೌಡ ನೆಕ್ಕರಾಜೆ ಮಾತನಾಡಿ “ಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಗ್ರಾಮಗಳಲ್ಲಿ ಮಕ್ಕಳು ಸಾಹಿತ್ಯದ ಊರುಗೋಲುಗಳಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಪೇಟೆ, ಪಟ್ಟಣಗಳಲ್ಲಿ ಕೆಲವರು ಕನ್ನಡ ಹೋರಾಟ ಎಂಬ ದಂಧೆಯನ್ನು ನಡೆಸುತ್ತಿದ್ದು, ಅವರ ವಿರುದ್ಧ ಜಾಗೃತರಾಗಬೇಕಿದೆ. ಗ್ರಾಮಗಳಲ್ಲಿ ಕನ್ನಡ ಸಾಹಿತ್ಯದ ಸಂಭ್ರಮ ನಡೆಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಒಲವು-ಅರಿವು ಮೂಡಿಸುವ ಕೆಲಸ ಶ್ಲಾಘನೀಯ. ಇಂದಿನ ಯುವಜನತೆ ಕನ್ನಡ ಸಂಸ್ಕೃತಿ, ಸಾಹಿತ್ಯದತ್ತ ಹೆಚ್ಚಿನ ಒಲವು ಹೊಂದಿಲ್ಲ. ಈ ಕಾರಣದಿಂದ ಗ್ರಾಮಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಜನಮನದಲ್ಲಿ ಬಿತ್ತುವ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಕಾರ್ಯ ಅರ್ಥಪೂರ್ಣ” ಎಂದು ಹೇಳಿದರು.
ಅತಿಥಿಯಾಗಿದ್ದ ಬಜತ್ತೂರು ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆ.ವಿ. ಮಾತನಾಡಿ, “ಗ್ರಾಮ ಸಾಹಿತ್ಯ ಸಂಭ್ರಮದ ಕಾರ್ಯಗಳ ಮೂಲಕ ಪ್ರತಿ ಮಗುವೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು” ಎಂದರು. ಪುತ್ತೂರು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಹಿತ್ಯ ಸಂಭ್ರಮ ನಿರಂತರವಾಗಿದ್ದು, 22 ಗ್ರಾಮ ಪಂಚಾಯಿತಿಯ 32 ಗ್ರಾಮಗಳಲ್ಲೂ ನಡೆಯಲಿದೆ. ಇದುವರೆಗೆ 1425 ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಲಾಗಿದೆ. ಇದೊಂದು ಕನ್ನಡ ಸಾಹಿತ್ಯದ ಜಾಗೃತಿ ಕಾರ್ಯಕ್ರಮ” ಎಂದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೆ.ಎಸ್.ರಾಧಾಕೃಷ್ಣ, ಹಿರಿಯ ಸಾಹಿತಿ ವಿಲ್ಫ್ರೆಡ್ ಡಿಸೋಜ, ಸಮತಾ ಮುದ್ಯ, ಹಿರಿಯ ಪತ್ರಕರ್ತ ಉದಯಕುಮಾರ್ ಯು.ಎಲ್. ಮಾತನಾಡಿದರು. ಹಿರಿಯ ಸಾಹಿತಿ ವಿಲ್ಫ್ರೆಡ್ ಡಿಸೋಜ, ಸಮತಾ ಮುದ್ಯ, ಪತ್ರಿಕಾ ಮಾಧ್ಯಮದ ಸೇವೆಗಾಗಿ ಮೇಘಾ ಪಾಲೆತ್ತಾಡಿ, ಹರೀಶ್ ಬಾರಿಂಜ, ಯುವ ಸಾಹಿತಿ ಜಗದೀಶ್ ಬಾರಿಕೆ, ಶೋಭಾನೆ ಹಾಡುಗಾರ್ತಿ ಪ್ರೇಮಾ ಬಾರಿಕೆ, ಲಕ್ಷ್ಮೀ ನಾರಾಯಣ ಅನುದಾನಿತ ಶಾಲಾ ಶಿಕ್ಷಕ ರಾಧಾಕೃಷ್ಣ ಕುವೆಚ್ಚಾರು ಮತ್ತು ಬಜತ್ತೂರು ರಿಕ್ಷಾ ಚಾಲಕ ಮನೋಜ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಜತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಮಲಾ ಭರತ್ ಉಪಸ್ಥಿತರಿದ್ದರು. ಗ್ರಾಮ ಸಾಹಿತ್ಯದ ಸಂಯೋಜಕ ನಾರಾಯಣ ಕುಂಬ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೌಢ ಶಾಲಾ ಶಿಕ್ಷಕ ಚಕ್ರಪಾಣಿ ಸ್ವಾಗತಿಸಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿ, ಯುವ ಸಾಹಿತಿ ಜಗದೀಶ್ ಬಾರಿಕೆ ನಿರೂಪಿಸಿದರು. ಬಜತ್ತೂರು ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು.