ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಮಹಿಳಾ ದಿನಾಚರಣೆ ಮತ್ತು ಹಿರಿಯ ಸಾಹಿತಿ ಮನೆ ಭೇಟಿ ಕಾರ್ಯಕ್ರಮವು ದಿನಾಂಕ 08-03-2024ರಂದು ಮಂಗಳೂರಿನ ಮೇರಿಹಿಲ್ ನಲ್ಲಿರುವ ಹಿರಿಯ ಕವಯಿತ್ರಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು “ಸಾಹಿತ್ಯವೆಂಬ ಸತ್ಯ ನಿತ್ಯ ನಿರಂತರ ಓದುಗರನ್ನು ತಟ್ಟುತ್ತಲೇ ಇರಬೇಕು. ಅದಕ್ಕಾಗಿ ಸಾಹಿತಿಗಳು ಹೊಸ ದೃಷ್ಟಿ ಮತ್ತು ಸೃಷ್ಟಿಯೊಂದಿಗೆ ತಮ್ಮ ಕೊಡುಗೆ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿ ಮನೆಗೆ ಬಂದು ಮಾತನಾಡಿಸಿದ್ದು ನನ್ನ ಜೀವನದ ಅತ್ಯಂತ ಮಧುರ ಕ್ಷಣ. ಇದರಿಂದ ನನಗಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದ ಎಲ್ಲರಿಗೂ ಸ್ನೇಹ ಸದ್ಭಾವನೆಯೊಂದಿಗೆ ಸ್ಫೂರ್ತಿ ಸಿಗುತ್ತದೆ.” ಎಂದು ಹೇಳಿದರು. ಕಸಾಪ ಕೇಂದ್ರ ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯ ಮುರಲೀ ಮೋಹನ್ ಚೂಂತಾರು ಅಭಿನಂದನೆಯ ಮಾತುಗಳನ್ನಾಡಿದರು.
ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಹೊಸಮನೆ, ವೇದಮಾಯು ಆಸ್ಪತ್ರೆಯ ಡಾ. ಕೇಶವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹೇಮಲತಾ ರೇವಣ್ಕರ್, ಡಾ. ಸೂರಜ್, ಡಾ. ಸೌಜನ್ಯಾ, ವಿಶ್ಲೇಶ್ ಎಮ್., ಸತ್ಯವತಿ ಭಟ್ ಕುಟುಂಬಸ್ಥರು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.