ಕಟೀಲು : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕಿನ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ಕವನ ರಚನೆ ಕಾರ್ಯಾಗಾರ’ವು ದಿನಾಂಕ 28-10-2023ರಂದು ನಡೆಯಿತು.
ಈ ಕಾರ್ಯಾಗಾರವನ್ನು ನಡೆಸಿಕೊಟ್ಟ ಬರಹಗಾರ್ತಿ ವಿಜಯಲಕ್ಷ್ಮೀ ಕಟೀಲು ಇವರು ಮಾತನಾಡುತ್ತಾ “ಸಾಹಿತ್ಯದಾಸಕ್ತಿ ಬೆಳೆಸುವ ಮೂಲಕ ಸಹೃದಯರಾಗಬೇಕು. ನಮ್ಮ ಕವಿತೆ ನಮ್ಮ ಕೈಯೊಳಗಿರುವ ಕೂಸು. ಅದು ನಮಗೂ ಖುಷಿಕೊಟ್ಟಂತೆ ಇನ್ನೊಬ್ಬರಿಗೂ ಖುಷಿಕೊಡಬೇಕು. ಲಯ, ಪ್ರಾಸ, ಛಂದಸ್ಸುಬದ್ಧವಾಗಿ ಅರ್ಥಪೂರ್ಣವಾಗಿ, ಹೊಸ ಚಿಂತನೆ ಮೂಡಿಸುವ, ನಾನಾ ಅರ್ಥಗಳನ್ನು ಸ್ಫುರಿಸುವ ಕವನಗಳನ್ನು ಬರೆಯಬೇಕು. ತಾಳಬದ್ಧವಾಗಿ ಹಾಡಲು ಸಾಧ್ಯವಾಗುವ ಕವನ ರಚನೆಯ ಪ್ರಯತ್ನದ ಜೊತೆಗೆ ಸತತ ಓದುವಿಕೆ, ಬರೆಯುವಿಕೆಯೂ ಮುಖ್ಯವಾಗುತ್ತದೆ. ಮಕ್ಕಳ ಕವನ, ಹನಿಗವನ, ಚುಟುಕು, ಹಾಯ್ಕು, ಭಾವಗೀತೆ, ಭಕ್ತಿಗೀತೆ, ರಂಗಗೀತೆ ಹೀಗೆ ನಾನಾ ಕಾವ್ಯಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹಳೆ, ನಡು, ಹೊಸಗನ್ನಡ ಕಾವ್ಯಗಳ ಓದುವಿಕೆ ಪೂರಕ” ಎಂದು ಹೇಳಿದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಕವನ ಸಂಕಲನಗಳನ್ನು ವಿತರಿಸಿ, ಪ್ರೇರಣೆಯ ಮಾತುಗಳನ್ನಾಡಿದ ಕಟೀಲು ದೇಗುಲದ ಅರ್ಚಕ ವಿದ್ವಾನ್ ಶ್ರೀ ಹರಿನಾರಾಯಣದಾಸ ಆಸ್ರಣ್ಣ, “ಯಕ್ಷಗಾನದಲ್ಲಿ ಪ್ರಸಂಗ ಪದ್ಯಗಳ ಜೊತೆಗೆ ಅರ್ಥಗಾರಿಕೆಯ ನಟನೆಯ ದೃಶ್ಯಕಾವ್ಯವನ್ನೂ ಕಾಣುತ್ತೇವೆ. ಕಾವ್ಯ ಮನಸ್ಸನ್ನು ಉಲ್ಲಾಸಗೊಳಿಸುವಂತಹದ್ದು. ಕವನ, ಕಥೆ ಹೀಗೆ ಸಾಹಿತ್ಯದ ಓದುವಿಕೆ ಹೆಚ್ಚಾಗಲಿ. ಸಂಸ್ಕೃತದ ಪ್ರಭಾವದ ಜೊತೆಗೆ ಹೆಚ್ಚು ಹೆಚ್ಚು ಕನ್ನಡದ ಪದಗಳನ್ನು ಬಳಸುವಂತಾಗಲಿ” ಎಂದರು.
ಕವಿ ಹೇಮಂತಕೃಷ್ಣ, ಕಸಾಪ ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು, ಸಂಘಟನಾ ಕಾರ್ಯದರ್ಶಿ ಹೆರಿಕ್ ಪಾಯಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಿಕೇತ್ ಉಡುಪ, ಸನ್ನಿಧಿ, ಉಪನ್ಯಾಸಕಿ ಗಾಯತ್ರೀ ಎನ್.ಬಿ. ಕಾರ್ಯಾಗಾರದ ಕುರಿತು ಮಾತನಾಡಿದರು. ಅನುಷಾ ಭಾವಗೀತೆ ಹಾಡಿದರು. ಕಸಾಪ ಕಾರ್ಯಕಕಾರಿ ಮಂಡಳಿಯ ರಾಜಶೇಖರ್ ಎಸ್. ನಿರೂಪಿಸಿ, ಹರೀಶ್ ಬಿ. ವಂದಿಸಿದರು. ಮೂಲ್ಕಿ ತಾಲೂಕಿನ 90 ವಿದ್ಯಾರ್ಥಿಗಳು ಭಾಗವಹಿಸಿದರು.