ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2019, 2020, 2021 ಹಾಗೂ 2022ನೇ ಸಾಲಿನ ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿಯನ್ನು ಜಾನಪದ ಹಾಡುಗಳನ್ನು ಹಾಡುವ ಕಲಾವಿದೆಯರ ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.
ಓದು-ಬರಹ ಬಾರದ ನಾಡಿನ ಗ್ರಾಮೀಣ ಪ್ರದೇಶದ ಜಾನಪದ ಕಲಾವಿದೆಗೆ ಅವರ ಪ್ರತಿಭೆಯನ್ನು ಪರಿಗಣಿಸಿ ಅದಕ್ಕನುಗುಣವಾಗಿ ಮೊದಲ ಆದ್ಯತೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಳ್ಳಿ ದತ್ತಿʼಯನ್ನು ಹಿರಿಯ ಪತ್ರಕರ್ತ ಹಾಗೂ ಲೇಖಕ ಶ್ರೀ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುತ್ತಾರೆ. ದತ್ತಿ ದಾನಿಗಳ ಮೂಲ ಉದ್ದೇಶದಂತೆ ಓದು ಬರಹ ಬಾರದ ಗ್ರಾಮೀಣ ಭಾಗದ ಜನಪದ ಕಲಾವಿದೆಯರನ್ನು ಗುರುತಿಸಿ ಅವರ ಪ್ರತಿಭೆಯನ್ನು ಹಾಗೂ ಅವರ ಸಾಧನೆಗಳನ್ನು ಗಮನಿಸಿ ʼಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿ ಆಯ್ಕೆ ಸಮಿತಿ ಮಾಡಿದೆ. ಇದುವರೆಗೂ ಈ ಪ್ರಶಸ್ತಿಯನ್ನು ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 6 ಜನ ಕಲಾವಿದೆಯರಿಗೆ ಪ್ರದಾನ ಮಾಡಲಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಎರಡೂ ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನಡೆಯದೇ ಇರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯ ಪ್ರಕಟಣೆ ಬಾಕಿ ಇತ್ತು. ಪ್ರಸ್ತುತ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷಾವಧಿಯಲ್ಲಿ ಬಾಕಿ ಉಳಿದಿದ್ದ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
2019ನೆಯ ಸಾಲಿನ ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಸೋಬಾನೆ ಪದಗಳನ್ನು ಹಾಡುವ ಹಿರಿಯ ಕಲಾವಿದೆ ದೊಡ್ಡನಾಗಮ್ಮ ಅವರನ್ನು, 2020ನೇ ಸಾಲಿನ ಈ ಪ್ರಶಸ್ತಿಗಾಗಿ ಚಾಮರಾಜನಗರ ಜಿಲ್ಲೆ ಸೋಬಾನೆ ಪದಗಳನ್ನು ಹಾಡುವ ಹಿರಿಯ ಕಲಾವಿದೆ ಚಿನ್ನಮ್ಮ, 2021ನೆಯ ಸಾಲಿನ ಪ್ರಶಸ್ತಿಗಾಗಿ ಹಾವೇರಿ ಜಿಲ್ಲೆಯ ಗರತಿಯ ಹಾಡುಗಳನ್ನು ಹಾಡುವ ಕಲಾವಿದೆ ಸಾವಕ್ಕಯಲ್ಲಪ್ಪ ಓಲೇಕಾರ್ ಅವರನ್ನು ಹಾಗೂ 2022ನೇ ಸಾಲಿನ ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಸೋಬಾನೆ ಹಾಡುಗಳನ್ನು ಹಾಡುವ ಕಲಾವಿದೆ ಬೋರವ್ವ ಭಾಗನ್ನವರ ಅವರನ್ನು ಆಯ್ಕೆ ಮಾಡಲಾಗಿದೆ.
ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿ ಆಯ್ಕೆ ಸಮಿತಿಯು ದತ್ತಿ ದಾನಿಗಳ ಆಶಯದಂತೆ ಗ್ರಾಮೀಣ ಭಾಗದ ಜನಪದ ಕಲಾವಿದೆಯರ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. ಪ್ರಸ್ತುತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲಾ ಜನಪದ ಕಲಾವಿದೆಯರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಈ ಎಲ್ಲಾ ಗ್ರಾಮೀಣ ಭಾಗದ ಸಾಧಕರು ಜಾನಪದ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸಾಧನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಸೂಕ್ಷ್ಮವಾಗಿ ಗಮನಿಸಿ, ಅವರ ಜನಪದ ಕಲಾ ಸಾಧನೆ ಗಮನದಲ್ಲಿಟ್ಟುಕೊಂಡು ಗೌರವಿಸುವುದರಿಂದ ಸಮಾಜದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಜನಪದ ಕಲಾ ಸಾಧಕರಿಗೆ ನೀಡಿದಂತಾಗುತ್ತದೆ. ಈ ಮೂಲಕ ಸಾಧನೆಯ ದಾರಿಯಲ್ಲಿ ಇರುವವರಿಗೆ ಇಂತಹ ಪ್ರಶಸ್ತಿಗಳು ಪ್ರೇರಣಾದಾಯಕವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರುಗಳಿದ್ದರು.
- ಶ್ರೀನಾಥ್ ಜೆ., ಮಾಧ್ಯಮ ಸಲಹೆಗಾರರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು