ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ಕನ್ನಡ ಭವನದಲ್ಲಿ ದಿನಾಂಕ : 04-07-2023ರಂದು ‘ಕಚೇರಿ ಉದ್ಘಾಟನೆ’ ಮತ್ತು ಕೊರಗಪ್ಪ ಶೆಟ್ಟಿ ಅವರ ಅಭಿನಂದನಾ ಗ್ರಂಥ ‘ರಂಗಸ್ಥಳದ ರಾಜ ಅರುವ’ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಸಾಪ ಮೂಡಬಿದರೆ ತಾಲೂಕು ಘಟಕ ಕಛೇರಿಯನ್ನು ಉದ್ಘಾಟನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡುತ್ತಾ “ಜನರಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳಸುವ ಜವಾಬ್ದಾರಿಯನ್ನು ‘ಕಸಾಪ’ ಹೊತ್ತುಕೊಂಡಿದೆ. ಕಸಾಪ ಪ್ರತಿ ವರ್ಷ ನೂರಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಸದಸ್ಯರ ಸಕ್ರಿಯತೆ ಮತ್ತು ಉತ್ಸುಕತೆಯಿಂದ ಉತ್ತಮ ಕೊಡುಗೆ ನೀಡಬಹುದಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಸಾಪ ಸದಸ್ಯತ್ವ ಕಡಿಮೆ ಇದೆ. ಇದು ಬೇಸರದ ಸಂಗತಿ. ಯುವಜನತ ಕಸಾಪ ಅಜೀವ ಸದಸ್ಯರಾಗುವ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಬೇಕಾಗಿದೆ” ಎಂದರು.
‘ರಂಗಸ್ಥಳದ ರಾಜ ಅರುವ’ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸಿದ ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ, “ಸಾಹಿತ್ಯ ಅಭಿರುಚಿ ಪಸರಿಸುವುದು ಸಾಹಿತ್ಯ ಪರಿಷತ್ತಿನ ಕೆಲಸ. ಯಕ್ಷಗಾನ ಬಹುಸಂಸ್ಕೃತಿಯ ಕಲೆ. ಇಲ್ಲಿ ಕಲಾವಿದ ಪಕ್ವತೆ ಪಡೆಯುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಕೊರಗಪ್ಪ ಶೆಟ್ಟಿ ಅವರ ಕಲಾ ಬದುಕು ಸರ್ವರಿಗೂ ಪ್ರೇರಣೆ. ಅರುವ ಕೊರಗಪ್ಪ ಶೆಟ್ಟಿ ಕಲಾವಿದರಿಗೆ ಆದರ್ಶಪ್ರಾಯರು. ಯಕ್ಷಗಾನ ಕ್ಷೇತ್ರದ ಅಪ್ಪಟ ಪ್ರತಿಭೆ, ಅರುವರ ಕಲಾಸಾಧನೆ ವಿಶ್ವವ್ಯಾಪಿಯಾಗಲಿ. ಯಕ್ಷಗಾನ ಸಾಹಿತ್ಯ ಭಾರತೀಯ ಶ್ರೇಷ್ಠ ಸಾಹಿತ್ಯದ ಸಾಲಿಗೆ ಸೇರಿದೆ. ಯಕ್ಷಗಾನ ಸಾಹಿತ್ಯ ಪೂರ್ಣವಾಗಿ ಓದಿದರೆ, ಸಮಗ್ರ ಕನ್ನಡ ಅಧ್ಯಯನ ನಡೆಸಿದಂತಾಗುತ್ತದೆ. ಆಳ್ವಾಸ್ ಪ್ರಕಾಶನ ಮೂಲಕ ಕಲಾವಿದರ ಅಭಿನಂದನಾ ಗ್ರಂಥ ಸರಣಿ ಆರಂಭಿಸಬೇಕು. ಯಕ್ಷಗಾನ ಕಲಾವಿದರ ಅಭಿನಂದನಾ ಗ್ರಂಥಗಳಲ್ಲಿ ಪಿಎಚ್‌ಡಿ ಮಾಡುವುದಾದರೆ ಮಾರ್ಗದರ್ಶನ ಮಾಡುತ್ತೇನೆ” ಎಂದರು.
ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ, “ತನ್ನ ಬದುಕಿನ ಅವಿಸ್ಮರಣೀಯ ನೆನಪುಗಳನ್ನು ಮೆಲುಕು ಹಾಕಿದರು. ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಪ್ರೇಕ್ಷಕರ ಪ್ರೇರಣೆಯೇ ತನ್ನ ಕಲಾ ಬದುಕಿಗೆ ಸ್ಪೂರ್ತಿ ನೀಡಿದ್ದು, ಜನರ ಪ್ರೀತಿಗೆ ಅಭಾರಿಯಾಗಿದ್ದೇನೆ” ಎಂದರು. ಈ ಸಂದರ್ಭದಲ್ಲಿ ಅರುವ-ಮಹಾಲಕ್ಷ್ಮಿ ದಂಪತಿಯನ್ನು ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, “ಅರುವ ಕೊರಗಪ್ಪ ಶೆಟ್ಟಿ ಯಕ್ಷಲೋಕದ ಶ್ರೀಮಂತ ಪ್ರತಿಭೆ. ಅವರ ವೈಯಕ್ತಿಕ ಮತ್ತು ಕಲಾ ಬದುಕಿನ ದಾರಿ ಸಹಸ್ರಾರು ಜನರಿಗೆ ಪ್ರೇರಣೆ. ನಕಾರಾತ್ಮಕ ಚಿಂತನೆ ತೊಡೆದು ಹಾಕಿ. ದೊರೆತ ಸಂಪನ್ಮೂಲ ಬಳಸಿಕೊಂಡು ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಾಹಿತ್ಯ ಪರಿಷತ್ತಿನ ಮೇಲಿದೆ. ಆಳ್ವಾಸ್ ಪ್ರಕಾಶನ 10ಕ್ಕೂ ಅಧಿಕ ಗ್ರಂಥ ಪಕಟಿಸಿದೆ. ಅವುಗಳಲ್ಲಿ ಅರುವರ ಗ್ರಂಥ ಶ್ರೇಷ್ಠ. ಅರುವ ಓರ್ವ ಚಾರಿತ್ರ್ಯವಂತ ಕಲಾವಿದ. ರಂಗಸ್ಥಳದಲ್ಲಿ ಕೋಪಿಷ್ಠನಂತೆ ಕಂಡರೂ ಸಾಮಾಜಿಕ ವಾಗಿ ಸಾತ್ವಿಕ ಗುಣವುಳ್ಳವರು. ಅರುವ ಪ್ರತಿಷ್ಠಾನದ ಮೂಲಕ ಅವರು ಮಾಡುತ್ತಿರುವ ಕಲಾಸೇವೆ ಅನನ್ಯ. ಅವರನ್ನು ಗುರುತಿಸುವ ಕೆಲಸ ಆಗಬೇಕು” ಎ೦ದರು.
ಕಸಾಪ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಯೋಗಿಶ್ ಕೈರೊಡಿ ನಿರೂಪಿಸಿದರು.