ಉಡುಪಿ : ದಿನಾಂಕ 20.07.2023 ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಘಟಕದ ವತಿಯಿಂದ ಕನ್ನಡ ಡಿಂಡಿಮ ಸರಣಿಯ ಎರಡನೇ ಕಾರ್ಯಕ್ರಮವು ಪಿ.ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಸಹಯೋಗದಲ್ಲಿ ಅಮೃತ ಭಾರತಿಯಲ್ಲಿ ನಡೆಯಿತು.
ಕ.ಸಾ.ಪ ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರವನ್ನು ಅವಿಭಜಿತ ದ.ಕ.ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷರಾದ ಹೆಬ್ರಿ ಯೋಗೀಶ್ ಭಟ್ ಉದ್ಘಾಟಿಸಿ ಮಾತನಾಡುತ್ತಾ “ಗಿಡವನ್ನು ಪೋಷಿಸಿದಾಗ ಅದು ಉತ್ತಮವಾಗಿ ಬೆಳೆಯುತ್ತದೆ. ಅಂತೆಯೇ ಬೆಳೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಹಿತ್ಯ ಸಂಸ್ಕೃತಿಯ ಪೋಷಣೆ ನೀಡಿದಾಗ ಅದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕ.ಸಾ.ಪ ಹೆಬ್ರಿ ಘಟಕದ ಕಾರ್ಯ ಶ್ಲಾಘನೀಯ” ಎಂದರು.
ರಾಜ್ಯ ಎನ್.ಎಸ್.ಎಸ್ ನಿಕಟ ಪೂರ್ವ ಅಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರ್ ಅವರು ಮಾತನಾಡಿ “ಎರಡುವರೆ ಸಾವಿರ ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಮೃದ್ಧವಾಗಿದೆ. ಯಾವುದೇ ಭಾಷೆಯನ್ನು ದೂರವಿಡದೇ ಹತ್ತಿರವಾದಾಗ ಭಾಷೆಯೂ ನಮಗೆ ಹತ್ತಿರವಾಗುತ್ತದೆ. ನೆಲದ ಭಾಷೆಯನ್ನು ಪ್ರೀತಿಸಬೇಕು” ಎಂದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕ.ಸಾ.ಪ ಕೋಶಾಧ್ಯಕ್ಷರಾದ ಮನೋಹರ ಪಿ. ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ಅರುಣ್ ಹೆಚ್.ವೈ., ಕ.ಸಾ.ಪ. ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಇವರೆಲ್ಲರ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.
ಕ.ಸಾ.ಪ. ಹೆಬ್ರಿ ಘಟಕದ ಪದಾಧಿಕಾರಿಗಳಾದ ಶ್ರೀಮತಿ ವೀಣಾ ಆರ್. ಭಟ್ ಸ್ವಾಗತಿಸಿ, ಶ್ರೀಮತಿ ಪುಪ್ಪಾವತಿ ಹೆಬ್ರಿ ವಂದಿಸಿದರು. ಅಮೃತ ಭಾರತಿ ವಿದ್ಯಾಲಯದ ಉಪ ಮುಖ್ಯೋಪಾಧ್ಯಾಯರಾದ ಶ್ರೀ ಮಹೇಶ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಡಿಂಡಿಮ ಕಾರ್ಯಕ್ರಮದನ್ವಯ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.