ಕಾಸರಗೋಡು : ಪೆರಿಯ ಆಲಕ್ಕೋಡು ಪರಂಪರ ವಿದ್ಯಾ ಪೀಠದ ಗೋಕುಲಂ ಗೋಶಾಲೆಯಲ್ಲಿ ಮೂರನೆಯ ದೀಪಾವಳಿ ಸಂಗೀತೋತ್ಸವವನ್ನು ದಿನಾಂಕ 10-11-2023ರಂದು ಎಡನೀರು ಮಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು “ಮಾನವನ ಏಳಿಗೆಗೆ ಕಲೆಯು ಅತ್ಯಂತ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಭಾರತೀಯ ಕಲೆಗಳನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುವ ಗೋಕುಲಂ ಗೋಶಾಲೆ ಪರಂಪರ ವಿದ್ಯಾ ಪೀಠದ ಪ್ರವೃತ್ತಿಗಳು ಅತ್ಯಂತ ಶ್ಲಾಘನೀಯ” ಎಂದು ಮಠಾಧಿಪತಿಗಳು ಅಭಿಪ್ರಾಯಪಟ್ಟರು. ಈ ಸಮಾರಂಭದ ಮುಖ್ಯ ಅತಿಥಿಗಳಾದ ಉದುಮ ಇಲ್ಲಿನ ಎಂ.ಎಲ್.ಎ.ಯಾದ ಸಿ.ಎಚ್.ಕುಂಜ್ಞಂಬು “ಸಂಗೀತವೆನ್ನುವುದನ್ನು ಪ್ರಕೃತಿಯ ಎಲ್ಲಾ ಚರಾಚರಗಳೂ ಆಸ್ವಾದಿಸುವವು ಎನ್ನುವುದರ ಒಂದು ಉದಾಹರಣೆ ಈ ಗೋಕುಲಂ ಗೋಶಾಲೆ” ಎಂದು ಹೇಳಿದರು.
ಪರಂಪರ ವಿದ್ಯಾ ಪೀಠದ ಗುರುಗಳಾದ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಮಾಜಿ ಎಂ.ಎಲ್.ಎ ಮತ್ತು ಪರಂಪರ ವಿದ್ಯಾ ಪೀಠದ ರಕ್ಷಾಧಿಕಾರಿಗಳೂ ಆದ ಕೆ. ಕುಂಞ ರಾಮನ್, ಕೇಂದ್ರ ಸರ್ವ ಕಲಾ ಶಾಲೆಯ ಪರೀಕ್ಷಾ ಕಂಟ್ರೋಲರ್ ಆದ ಜಯಪ್ರಕಾಶ್ ಬಿ. ಮತ್ತು ಆರ್.ಡಿ.ಸಿ.ಯ ಎಂ.ಡಿ.ಯವರಾದ ಶಿಜಿನ್ ಪರಂಬತ್ತ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಸ್ತ್ರೀಯ ಸಂಗೀತ ಕಛೇರಿಗಳು, ವೀಣಾ ವಾದನ ಮತ್ತು ಭರತನಾಟ್ಯ ಕಾರ್ಯಕ್ರಮ ನಡೆದವು.