ವರ್ಕಾಡಿ : ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು (ರಿ) , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜೂನ್ 24ರಿಂದ ಜೂನ್ 30ರವರೆಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಎರಡನೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಭಕ್ತಿ, ಭಾವ, ಜನಪದಗೀತೆಗಳ ‘ಕನ್ನಡ ಡಿಂಡಿಮ’ ದಿನಾಂಕ : 25-06-2023ರಂದು ವರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಜರಗಿತು. ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಪ್ರಾಯೋಜಿಸಿದ ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಷ್ ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವರ್ಕಾಡಿ ಚರ್ಚ್ನ ಗುರುಗಳಾದ ರೆ|ಪಾ| ಬಾಸಿಲ್ವಾಜ್ ಆಶೀರ್ವದಿಸಿ ಮಾತನಾಡುತ್ತಾ “ರಂಗ ಚಿನ್ನಾರಿ ಸಂಸ್ಥೆ ಕಳೆದೆರಡು ದಶಕಗಳಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಕರ್ನಾಟಕ ಸರಕಾರ ಉತ್ತಮವಾಗಿ ಸಹಕಾರ ನೀಡುತ್ತಿರುವುದು ಸಂತಸದ ವಿಚಾರ. ಇನ್ನಷ್ಟು ಕನ್ನಡದ ಕಾರ್ಯಗಳು ಕನ್ನಡದ ಮನಸ್ಸುಗಳನ್ನು ಬೆಸೆಯುತ್ತಾ ರಂಗ ಚಿನ್ನಾರಿ ನಡೆಸಲಿ” ಎಂದು ಹೇಳುತ್ತಾ ಸಂಸ್ಥೆಯ ರೂವಾರಿ ಕಾಸರಗೋಡು ಚಿನ್ನಾ ಇವರ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮ ಸಂಯೋಜಕರೂ, ರಂಗಚಿನ್ನಾರಿ ಸಂಚಾಲಕರೂ ಆದ ಕಾಸರಗೋಡು ಚಿನ್ನಾ ಕಾಸರಗೋಡು ಕನ್ನಡ ಹಬ್ಬದ ಹಾಗೂ ರಂಗ ಚೆನ್ನಾರಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಲೇಖಕ ಯೋಗೀಶ ರಾವ್ ಚಿಗುರುಪಾದೆ, ಶ್ರೀಮತಿ ಸಾವಿತ್ರಿ ಹೊಳ್ಳ ಆತಿಥಿಗಳಾಗಿ ಭಾಗವಹಿಸಿದ್ದರು. ವರ್ಕಾಡಿಗೆ ಕೀರ್ತಿ ತಂದ ಪ್ರತಿಭೆಗಳಾದ ನಾಟ್ಯ ತರಬೇತಿ ಗುರುಗಳು ಸುಷ್ಮ ವರ್ಕಾಡಿ, ಯಕ್ಷಗಾನ ತಾಳಮದ್ದಳೆ ತರಬೇತಿ ಗುರುಗಳಾದ ಶ್ರೀಮತಿ ಸರಸ್ವತಿ ಹೊಳ್ಳ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ಸೀತಾರಾಂ ಬೇರಿಂಜ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಡೆದ ‘ಕನ್ನಡ ಡಿಂಡಿಮ’ ಪ್ರಸ್ತುತಿಯಲ್ಲಿ ನಾಡಿನ ಖ್ಯಾತ ಗಾಯಕರಾದ ಮುಲ್ಕಿ ರವೀಂದ್ರ ಪ್ರಭು, ಕಿಶೋರ್ ಪೆರ್ಲ ಹಾಗೂ ಗಾಯಕಿ ಅಕ್ಷತಾ ವರ್ಕಾಡಿ ಇವರುಗಳು ಕನ್ನಡ ಭಕ್ತಿ, ಭಾವ, ಜನಪದಗೀತೆಗಳ ಹಾಡುಗಳನ್ನು ಹಾಡಿ ಸೇರಿದ ಜನಸ್ತೋಮವನ್ನು ರಂಜಿಸಿದರು. ಕನ್ನಡ ಹಬ್ಬದ ಎಲ್ಲಾ ಕಲಾವಿದರಿಗೆ ಹಾಗೂ ಅತಿಥಿಗಳಿಗೆ ಕನ್ನಡ ಹಬ್ಬದ ಸ್ಮರಣಿಕೆಯನ್ನು ನೀಡಿ ರಂಗ ಚಿನ್ನಾರಿ ವತಿಯಿಂದ ಗೌರವಿಸಲಾಯಿತು.