ಕಾಸರಗೋಡು : ಕಾಸರಗೋಡಿನ ಮಂಗಲ್ಪಾಡಿಯ ಪರಂಕಿಲದ ಭಜನ ಮಂದಿರದಲ್ಲಿ ಕಲಾಕುಂಚ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 21-05-2023ರಂದು ‘ವ್ಯಂಗ್ಯಚಿತ್ರ ರಚನಾ ಶಿಬಿರ’ ನಡೆಯಲಿದೆ.
ಖ್ಯಾತ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ನಿರ್ದೇಶನದಲ್ಲಿ ನಡೆಯುವ ಈ ಶಿಬಿರದಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರಕ್ಕೆ ಸೇರಲಿಚ್ಚಿಸುವ ಶಿಬಿರಾರ್ಥಿಗಳು ಡ್ರಾಯಿಂಗ್ ಪುಸ್ತಕ, ಪೆನ್ಸಿಲ್, ಕ್ರೆಯಾನ್ಸ್ ರಬ್ಬರ್ ಗಳನ್ನು ತಾವೇ ತರಬೇಕು. ಶಿಬಿರವು ಬೆಳಿಗ್ಗೆ 9-30ರಿಂದ ಸಂಜೆ 4-00ರವರೆಗೆ ನಡೆಯಲಿರುವುದು.
ಈ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಶಿಬಿರಾರ್ಥಿಗಳಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಸಂಘಟಕರೇ ಆಯೋಜಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 8281283091 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಕಾಸರಗೋಡು ಗಡಿನಾಡಿನ ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಶ್ರೀ ವಿರಾಜ್ ಅಡೂರು ಇವರು ಕೃಷಿ, ಶಿಕ್ಷಣ, ವ್ಯಂಗ್ಯಚಿತ್ರ, ಸಾಹಿತ್ಯ ಸಾಮಾಜಿಕ ಸಂಘಟನೆ, ಪತ್ರಿಕೋದ್ಯಮ, ಶಿಬಿರ ಸಂಯೋಜನೆ ಶಿಬಿರದ ಸಂಪನ್ಮೂಲ ವ್ಯಕ್ತಿ ಹೀಗೆ ಕ್ರಿಯಶೀಲರಾಗಿರುವ ಇವರು ಪ್ರಜಾವಾಣಿ ಪತ್ರಿಕೆಯ ವರದಿಗಾರರು. ಚುಟುಕುಟುಕು ಇವರ ಸ್ವರಚಿತ ಕವನ ವಾಚನವು ಮಂಗಳೂರು ಆಕಾಶವಾಣಿಯಿಂದ ಅನೇಕ ಬಾರಿ ಪ್ರಸಾರವಾಗಿದೆ. ‘ಕೇರಳ ರಾಜ್ಯ ಮಾಧ್ವ ಬ್ರಾಹ್ಮಣ ಕಲಾವಿದ ಪ್ರಶಸ್ತಿ’, ‘ಪಾಶುಪತ ಸಾಹಿತ್ಯ ಪ್ರಶಸ್ತಿ’, ಕಾಸರಗೋಡು ಜಿಲ್ಲಾ ‘ಚುಟುಕು ಸಾಹಿತ್ಯ ಪ್ರಶಸ್ತಿ’ ಸಹಿತ ಅನೇಕ ಪ್ರಶಸ್ತಿಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.