02 ಮಾರ್ಚ್ 2023, ಮಣಿಪಾಲ: “ಕೊಂಕಣಿ ರಂಗಭೂಮಿ”ಗೆ ಚಿನ್ನಾ ಕೊಡುಗೆ ಅನನ್ಯವಾದದ್ದು – ಟಿ. ಅಶೋಕ್ ಪೈ
ಕೊಂಕಣಿ ರಂಗಭೂಮಿಯನ್ನು ಜನ ಸಮಾನ್ಯರೆಡೆಗೆ ಕೊಂಡೊಯ್ಯಲು ಕಾಸರಗೋಡು ಚಿನ್ನಾ ಮಾಡಿರುವ ಕೆಲಸ ಅನನ್ಯವಾದದ್ದು. ಮಲಯಾಳಂ ಹಾಗೂ ಕನ್ನಡ ಭಾಷೆಯ ಎರಡು ಕಿರು ನಾಟಕಗಳನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ರಂಗಕ್ಕೇರಿಸುವುದೆಂದರೆ ಅದು ಸುಲಭದ ಕೆಲಸವಲ್ಲ. ಇಂಥಹ ಕ್ರಿಯಾತ್ಮಕವಾದ ಕೆಲಸಗಳಲ್ಲಿ ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನದವರು ಯಾವತ್ತೂ ಜೊತೆಗಿರುತ್ತೇವೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಅಶೋಕ ಪೈ ಅವರು ಹೇಳಿದರು.
ಅವರು ಮಣಿಪಾಲದ ಆ್ಯಂಫಿ ಥಿಯೇಟರ್ ನಲ್ಲಿ ಫೆಬ್ರವರಿ 25ರಂದು ಕಾಸರಗೋಡು ಚಿನ್ನಾ ನಿರ್ದೇಶನದ “ಕರ್ಮಾಧೀನ” ಮತ್ತು “ಎಕ್ಲೊ ಆನೇಕ್ಲೊ” ಕೊಂಕಣಿ ನಾಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಹಾಗೂ ಮಾಹೆ ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಏರ್ಪಡಿಸಲ್ಪಟ್ಟ ನಾಟಕ ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಹೆ ವಿಶ್ವ ವಿದ್ಯಾನಿಲಯದ ನಿರ್ದೇಶಕ ಗಿರಿಧರ ಕಿಣಿಯವರು ಅಪರೂಪವಾಗುತ್ತಿರುವ ಕೊಂಕಣಿ ರಂಗಭೂಮಿಗೆ ಜೀವ ತುಂಬುತ್ತಿರುವ ಚಿನ್ನಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶುಭಾಶಂಸನೆ ನೀಡಿದ ಖ್ಯಾತ ಕವಿ, ಲೇಖಕ ಮನೋಹರ ನಾಯಕ್ ಅವರು ಒಳ್ಳೆಯ ಕೃತಿಗಳು ಯಾವ ಭಾಷೆಯಲ್ಲೇ ಇರಲಿ, ಅದು ಕೊಂಕಣಿ ಭಾವಾನುವಾದ ಆಗಬೇಕಾದ ಅಗತ್ಯತೆಯನ್ನು ಹೇಳಿದರು. ಭಾಷಾಂತರ ಮತ್ತು ಭಾವಾನುವಾದ ಇವೆರಡರ ವ್ಯತ್ಯಾಸವನ್ನು ಮನಗಾಣಬೇಕೆಂದರು.
ಖ್ಯಾತ ಸಂಗೀತಗಾರ ತೋನ್ಸೆ ರಂಗ ಪೈಯವರು ಕೊಂಕಣಿ ಸೇವಕರಾದ ಪ್ರಕಾಶ್ ಶೆಣೈಯವರ ಭಾಷಾ ಪ್ರೇಮದ ಬಗ್ಗೆ ತಿಳಿಸಿ, ಅವರು ಮೌನವಾಗಿ ಮಾಡಿದ ಸಾಹಸಗಳ ಬಗ್ಗೆ ಹೇಳಿದರು. ಅನಂತ ವೈದಿಕ ಕೇಂದ್ರದ ಮುಖ್ಯಸ್ಥರಾದ ವೇದ ಮೂರ್ತಿ ಚೇಂಪಿ ರಾಮಚಂದ್ರ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಸರಗೋಡು ಚಿನ್ನಾ ನೇತೃತ್ವದಲ್ಲಿ ಜರಗಿದ ರಾಜ್ಯ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನ “ಕೊಂಕಣಿ ಮಾತಾ” ಮಹಿಳಾ ಸಮ್ಮೇಳನ – ಘರ ಘರ ಕೊಂಕಣಿ ಜೊತೆಗೆ ಗಾಂಟಿ, ಧರ್ಮಯುದ್ಧ ಮುಂತಾದ ಕಾರ್ಯಕ್ರಮಗಳನ್ನು ವಿವರಿಸಿದರು.
ಕೊಂಕಣಿ ಭಾಷಾ ಸೇವಕರಾದ ಪ್ರಕಾಶ್ ಶೆಣೈ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಟ ನಿರ್ದೇಶಕ ಕಾಸರಗೋಡು ಚಿನ್ನಾ ಅವರನ್ನು ಅನಂತ ವೈದಿಕ ಕೇಂದ್ರದ ಪರವಾಗಿ ಟಿ. ಅಶೋಕ ಪೈ, ರಂಗಪ್ಪ ಗಿರಿಧರ ಕಿಣಿ, ಮನೋಹರ ನಾಯಕ್ ಅವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ವೇದ ಮೂರ್ತಿ ಹರಿಪ್ರಸಾದ ಭಂಡಾರ್ಕರ್ ಅವರು ನಿರೂಪಿಸಿದರು. ಚೇಂಪಿ ರಮ್ಯಾಚಂದ್ರ ಭಟ್ ಧನ್ಯವಾದವಿತ್ತರು.
ಕೊನೆಯಲ್ಲಿ ನಾಟಕ ಕಲಾವಿದರಿಗೆಲ್ಲ ಮಲ್ಪೆ ಆನಂದ ನಾಯಕ್ ನೀಡಿರುವ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ನಾಟಕ ಕಲಾವಿದರು : ಶಶಿಭೂಷಣ ಕಿಣಿ, ಡಾ. ಸುಧೇಶ ರಾವ್, ರಾಜ ಗೋಪಾಲ ಶೇಟ್, ಶ್ರೀಮತಿ ರಂಜಿತಾ ಶೇಟ್, ದೇವೇಂದ್ರ ಶೆಣೈ
ಸಂಗೀತ : ಅನಿಲ್ ನಾವೂರ್ ಬೆಳಕು : ಈಶ್ವರ
ರಂಗ ಸಜ್ಜಿಕೆ : ವೆಂಕಟೇಶ್ ಶೇಟ್, ಸುಬ್ರಹ್ಮಣ್ಯ ಪ್ರಭು