ಕಾಸರಗೋಡು : ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ನಡೆಸಿದ ‘ಮಕ್ಕಳ ಕಲಾ ಶಿಬಿರ’ದ ಉದ್ಘಾಟನೆಯು ದಿನಾಂಕ 05-05-2023ರಂದು ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಬಾಲಗೋಕುಲ ಕಾಸರಗೋಡು ತಾ. ಶಿಕ್ಷಣ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಅರಿವಳಿಕೆ ತಜ್ಞ ಡಾ. ವೆಂಕಟಗಿರಿ ಶಿಬಿರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾರವರು “ಪ್ರತಿಭಾ ಪ್ರದರ್ಶನ ಮತ್ತು ವ್ಯಕ್ತಿತ್ವ ವಿಕಾಸವು ಕಲಾ ಶಿಬಿರಗಳಿಂದ ಸಾಧ್ಯ. ರಂಗಭೂಮಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುತ್ತದೆ. ಅಲ್ಲದೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ. ಕಾಸರಗೋಡಿನಂತಹ ಸಂಸ್ಕೃತಿ ಸಂಪನ್ನವಾದ ನೆಲದಲ್ಲಿ ಕಲಾ ಶಿಬಿರಗಳು ಹೆಚ್ಚು ನಡೆಯಬೇಕಾದ ಅನಿವಾರ್ಯತೆಯಿದೆ” ಎಂದು ಹೇಳಿದರು. ಕಾಸರಗೋಡು – ದ್ವಾರಕಾನಗರ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ನಿರ್ದೇಶಕಿ ಸಾಯಿರತ್ನ ಶುಭ ಹಾರೈಸಿದರು.
ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರು ಪ್ರಸಾದ್ ಕೋಟೆಕಣಿ ಪ್ರಸ್ತಾವಿಸಿದರು. ತ್ರಿವೇದ್ ಕೆ.ವಿ. ಸಾಗತಿಸಿ, ಪ್ರೇಕ್ಷಾ ಯೋಗೀಶ್ ವಂದಿಸಿದರು. ತ್ರಿಷಾ ಜಿ.ಕೆ. ನಿರೂಪಿಸಿದರು. ಬಳಿಕ ಸಂಸ್ಕಾರದ ಕುರಿತು ದೇವದಾಸ್ ನುಳ್ಳಿಪ್ಪಾಡಿ ತರಬೇತಿ ನೀಡಿದರು. ಕಿರಣ್ ಕಲಾಂಜಲಿ ಶಿಬಿರಕ್ಕೆ ನೇತೃತ್ವ ವಹಿಸಿದ್ದರು.