ಬಜಪೆ: ಕಟೀಲು ದುರ್ಗಾ ಮಕ್ಕಳ ಮೇಳದ 14ನೇ ವಾರ್ಷಿಕ ಕಲಾ ಪರ್ವ ದಿನಾಂಕ 04-06-2023ರ ಶನಿವಾರ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯಿತು. ಈ ಸಂದರ್ಭ ಯುವ ಹಾಗೂ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎರಡೂವರೆ ಸಾವಿರಕ್ಕೂ ಹೆಚ್ಚು ಬಾರಿ ‘ಶ್ರೀದೇವಿ’ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿ ಪ್ರಸಿದ್ಧರಾಗಿರುವ ಹಿರಿಯ ಕಲಾವಿದ ಬಾಯಾರು ರಮೇಶ ಭಟ್ಟ ಅವರಿಗೆ ಕಟೀಲು ದುರ್ಗಾ ಮಕ್ಕಳ ಮೇಳ ಪ್ರಶಸ್ತಿ ಹಾಗೂ ಉದಯೋನ್ಮುಖ ಯುವ ಪ್ರತಿಭೆ ಪ್ರದ್ಯುಮ್ನ ಮೂರ್ತಿ ಕಡಂದಲೆ ಯವರಿಗೆ ಶ್ರೀನಿಧಿ ಆಸ್ರಣ್ಣ ಸ್ಮರಣಾರ್ಥ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹಿರಿಯಕಲಾವಿದ, ಯಕ್ಷಗಾನದ ಗುರು ಸಂಘಟಕ ಮತ್ತು ಸರಯೂ ಮಕ್ಕಳ ಮೇಳದ ಸಂಚಾಲಕ ರವಿ ಅಲೆವುರಾಯ ಅವರಿಗೆ ವಿಶೇಷ ಗೌರವಾರ್ಪಣೆ ನೀಡಿ ಸನ್ಮಾನಿಸಲಾಯಿತು.
ಉದ್ಯಮಿ ರಾಮ ಪ್ರಕಾಶ್ ಹೊಳ್ಳ ಮಾತನಾಡಿ ‘ ಯಕ್ಷಗಾನದ ಪರಂಪರೆ ಹಾಗೂ ಮರೆತು ಹೋಗುತ್ತಿರುವ ಪೂರ್ವ ರಂಗದ ಅಭ್ಯಾಸ- ಪ್ರದರ್ಶನದ ಜತೆಗೆ ಸುಸಂಸ್ಕೃತ ಬದುಕಿನ ಪಾಠಗಳನ್ನು ಮಕ್ಕಳಲ್ಲಿ ಜಾಗೃತಗೊಳಿಸುವಲ್ಲಿ ದುರ್ಗಾ ಮಕ್ಕಳ ಮೇಳ ಶ್ಲಾಘನೀಯ ಪಾತ್ರವಹಿಸಿದೆ ’ ಎಂದರು. ದೇವಳದ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀ ಪ್ರಸಾದ್ ಶೆಟ್ಟಿ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಚರಣ್ ಜೆ.ಶೆಟ್ಟಿ ಅತ್ತೂರು, ರತ್ನಾಕರ ಶೆಟ್ಟಿ ಎಕ್ಕಾರು, ರವಿರಾಜ ಆಚಾರ್ಯ ಬಜಪೆ, ರವಿ ಪ್ರಸನ್ನ, ಧಮೇಂದ್ರ ಕಾಟಿಪಳ್ಳ, ಸುಧಾಕರ ಪೂಂಜ ಮತ್ತಿತರರು ಉಪಸ್ಥಿತರಿದ್ದರು. ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿ ನಾರಾಯಣದಾಸ ಆಸ್ರಣ್ಣ ಪ್ರಾಸ್ತಾವಿಕ ಮಾತನಾಡಿದರು. ಕಮಲಾದೇವಿ ಪ್ರಸಾದ ಆಸ್ರಣ್ಣ ಸ್ವಾಗತಿಸಿ ವಾದಿರಾಜ ಕಲ್ಲೂರಾಯ, ಪಶುಪತಿ ಶಾಸ್ತ್ರಿ ಮತ್ತು ವೈಷ್ಣವಿ ರಾವ್ ಸನ್ಮಾನಪತ್ರ ವಾಚಿಸಿದರು. ಸ್ಕಂದ ಪ್ರಸಾದ್ ಭಟ್ ವಂದಿಸಿ, ಮೇಳದ ಕಾರ್ಯದರ್ಶಿ ವಾಸುದೇವ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದುರ್ಗಾ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ‘ಭಾರ್ಗವ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು.