ಮಂಗಳೂರು : ಮಂಗಳೂರಿನ ಕಥಾಬಿಂದು ಪ್ರಕಾಶನ ಪಿ.ವಿ. ಪ್ರದೀಪ್ ಕುಮಾರ್ ಅವರ ಪರಿಕಲ್ಪನೆಯೊಂದಿಗೆ 2007ರಲ್ಲಿ ಪ್ರಾರಂಭವಾದ ಪ್ರಕಾಶನ ಸಂಸ್ಥೆ. 18 ವಸಂತಗಳಲ್ಲಿ ದೇಶ ವಿದೇಶಗಳಲ್ಲಿ ಸಾಹಿತ್ಯ ಕಾರ್ಯಕ್ರಮದೊಂದಿಗೆ ಕನ್ನಡ ಕಂಪು ಪಸರಿಸುವ ಮೂಲಕ ವಿದೇಶಗಳಲ್ಲಿಯೂ ಕೂಡ ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. 2024ರಲ್ಲಿ ಮಂಗಳೂರಿನ ಪುರಭವನದಲ್ಲಿ ಒಂದೇ ದಿನ 50 ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ. ಒಂದೆರಡು ತಿಂಗಳ ಅಂತರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 50 ಕೃತಿಗಳನ್ನು ಅನಾವರಣ ಮಾಡಿದ್ದು, ಅದೇ ವರ್ಷ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ದ್ವಿಭಾಷಾ ಕವಿಗೋಷ್ಠಿಗಳನ್ನು ಹೈದರಾಬಾದಿನಲ್ಲಿ ನಡೆಸಿದ್ದಾರೆ. ಈ ಎಲ್ಲಾ ಕೃತಿಗಳ ಲೇಖಕರೂ ಉದಯೋನ್ಮುಖ ಬರಹಗಾರರು ಎನ್ನುವುದು ಗಮನಾರ್ಹ.
ಎಲೆಮರೆಯ ಕಾಯಿಯಂತೆ ಇರುವ ಪ್ರತಿಭಾವಂತರನ್ನು ಗುರುತಿಸಿ ತೆಗೆದು ಪುಸ್ತಕ ಲೋಕಕ್ಕೆ ಪರಿಚಯಿಸುತ್ತಾ ಬಂದಿದ್ದರೂ, ಈ ದಾರಿ ಮುಳ್ಳಿನ ಹಾದಿಯೇ ಆಗಿತ್ತು. ಪ್ರಕಾಶನ ಸಂಸ್ಥೆ ನಡೆಸುವುದೆಂದರೆ ಕಬ್ಬಿಣದ ಕಡಲೆ ಎಂದು ತಿಳಿದಿದ್ದರೂ ಪ್ರದೀಪ್ ಕುಮಾರ್ ಅವರು ಸಾಹಸದಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುವುದರ ಜೊತೆಗೆ ಕಳೆದ ವರ್ಷ ಮತ್ತೆ ಉಡುಪಿಯ ರಾಜಾಂಗಣದಲ್ಲಿ 50 ಕೃತಿಗಳನ್ನು ಅನಾವರಣ ಮಾಡಿದ್ದಾರೆ. ಒಟ್ಟಿನಲ್ಲಿ ಒಂದೇ ವರ್ಷದಲ್ಲಿ 200 ಕೃತಿಗಳ ಪ್ರಕಟಣೆ ಮಾಡಿರುವುದು ಇವರ ಹೆಗ್ಗಳಿಕೆ. ಕಥಾಬಿಂದು ಪ್ರಕಾಶನವು ಸ್ಪರ್ಧಾತ್ಮಕ ದರಗಳಲ್ಲಿ ಲೇಖಕರು ಬಯಸಿದ ಸಂಖ್ಯೆಯ ಪ್ರತಿಗಳನ್ನು ಪ್ರಕಟಿಸಿ ಕೊಡುವುದು ಇವರ ವಿಶೇಷತೆ. ಲೇಖಕರು, ಕವಿಗಳು ಅವರು ಇರುವ ಕಡೆಯೇ ಆನ್ ಲೈನ್ ನಲ್ಲಿ ಕಳಿಸಿ ಕರಡು ಪ್ರತಿ ತಿದ್ದಿಸಿ, ಮತ್ತೆ ಆನ್ ಲೈನ್ ನಲ್ಲಿ ಕಳಿಸುವ ವ್ಯವಸ್ಥೆ ಕೂಡ ಇದೆ. ಇದು ಇವರ ಪ್ರಕಟಣೆಯ ಮತ್ತೊಂದು ವೈಶಿಷ್ಟ್ಯ. ಲೇಖಕರು ಕಳುಹಿಸುವ ಮೂಲ ಪಠ್ಯವನ್ನು ಡಿಟಿಪಿ ಮಾಡಿ, ಕವರ್ ಪುಟ ವಿನ್ಯಾಸಗೊಳಿಸಿ ಅಚ್ಚುಕಟ್ಟಾಗಿ ಪುಸ್ತಕವನ್ನು ಮುದ್ರಿಸಿ ಸಾಮೂಹಿಕ ಪುಸ್ತಕ ಬಿಡುಗಡೆ ಕೂಡ ಪೂರಕ ಸೇವೆಯಾಗಿ ಮಾಡುವುದರ ಮೂಲಕ ಕೃತಿಯು ಹತ್ತಾರು ಜನಕ್ಕೆ ಪರಿಚಯಿಸುವ ಸಾಹಸ ಕೂಡ ಮಾಡುತ್ತಾರೆ. ಹೊಸ ಬರಹಗಾರರ ಕೈಹಿಡಿಯುವುದು ಈ ಸಂಸ್ಥೆಯ ವಿಶಿಷ್ಟತೆ.
ಇದೇ ಸಾಲಿನ ಮೇ 3ರಂದು ಮುಂಬೈಯ ಮಾತಂಗದಲ್ಲಿರುವ ಮೈಸೂರು ಎಸೋಸಿಯೆಷನ್ ಸುಭಾಂಗಣದಲ್ಲಿ ಇನ್ನೂ 50 ಪುಸ್ತಕಗಳನ್ನು ಬಿಡುಗಡೆ ಮಾಡುವ ಯೋಜನೆಗೆ ತಯಾರಿ ನಡೆದಿದೆ. ಹೀಗೆ ಕಥಾಬಿಂದು ಪ್ರಕಾಶನ ಕನ್ನಡದ ಏಳಿಗೆಗಾಗಿ ನಿರಂತರ ಕಾರ್ಯಪ್ರವೃತ್ತವಾಗಿದ್ದು, ಹೆಚ್ಚಿನ ಹುಮ್ಮಸ್ಸಿನೊಂದಿಗೆ ಪ್ರಕಾಶನ ಚುರುಕುಗೊಳ್ಳುತ್ತಿದೆ. ಸುಧೀರ್ಘ 18 ವಸಂತಗಳ ಕಾಲದಲ್ಲಿ ಸಂಸ್ಥೆಯು ದೇಶ ವಿದೇಶಗಳಲ್ಲಿ ಸಾಹಿತ್ಯ ಕಾರ್ಯಕ್ರಮದೊಂದಿಗೆ ಕನ್ನಡ ಕಂಪನ್ನು ಪಸರಿಸಿ ಮೂಲಕ ವಿದೇಶಗಳಲ್ಲಿಯೂ ಕೂಡ ಕನ್ನಡ ಪುಸ್ತಕ ಬಿಡುಗಡೆ ಮಾಡಿದ್ದಾರೆ. 2023ರ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ‘ಪುಸ್ತಕ ಸೊಗಸು ಪ್ರಶಸ್ತಿ’ಯನ್ನು ಪಿ.ವಿ. ಪ್ರದೀಪ್ ಕುಮಾರ್ ಇವರು ಬೆಂಗಳೂರಿನಲ್ಲಿ ಸ್ವೀಕರಿಸಿದ್ದಾರೆ. ಅವರ ಕನ್ನಡದ ಕುರಿತಾದ ಕಾಳಜಿ ಇನ್ನೂ ಹೆಚ್ಚಾಗಿ ಪ್ರಕಟವಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆ.
ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
