ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ನಡೆಯುವ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮವು ದಿನಾಂಕ 10-02-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಸುಪ್ರಸಿದ್ಧ ಅಂಕಣಕಾರ ಹಾಗೂ ಸಂಸ್ಕೃತಿ ವಿಮರ್ಶಕರಾಗಿರುವ ಡಾ. ಬಿ. ಭಾಸ್ಕರ ರಾವ್ ಕಠೋಪನಿಷತ್ತಿನ ಬಗ್ಗೆ ಮಾತನಾಡಿ “ನಚಿಕೇತನ ಕಥೆಯ ಮೂಲಕ ಒಂದು ರೂಪಕವಾಗಿ ಸಾರ್ವಕಾಲಿಕವಾದ ಸಾವಿನ ಬಗ್ಗೆ ಮಾತ್ರವಲ್ಲ, ಮನುಷ್ಯನ ಅಸ್ತಿತ್ವದ ಬಗ್ಗೆ ಮತ್ತು ಅರ್ಥಪೂರ್ಣ ಬದುಕನ್ನು ಬಾಳಿ ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳುವ ಬಗೆಯನ್ನು ಕಠೋಪನಿಷತ್ತು ವಿವರಿಸುತ್ತದೆ. ಆತ್ಮದ ಅವಿನಾಶತ್ವ ಮತ್ತು ಬ್ರಹ್ಮನ ಅಂತರ್ಯಾಮಿತ್ವವನ್ನು ಕಠೋಪನಿಷತ್ತು ವಿವರವಾಗಿ ತಿಳಿಸುತ್ತದೆ. ಎಲ್ಲ ವಿವಿಧ ಪ್ರಲೋಭನೆಗಳನ್ನು ನಿರಾಕರಿಸುತ್ತಾ ಪ್ರಶ್ನೆ ಕೇಳಿ ಯಮನಿಂದ ಆತ್ಮ ತತ್ವದ ಉಪದೇಶವನ್ನು ನಚಿಕೇತನು ಪಡೆದುಕೊಂಡ. ಪ್ರಶ್ನಿಸುವ ಮತ್ತು ಸತ್ಯವನ್ನು ಸ್ವೀಕರಿಸುವ ಇಂತಹ ದೈರ್ಯ ಮನುಷ್ಯರಲ್ಲೂ ಬರಬೇಕಾಗಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಸಾಧನೆಗಳಿಂದ ಮನುಷ್ಯ ಸತ್ತ ನಂತರವೂ ಪ್ರಪಂಚ ಆತನನ್ನು ಸದಾ ನೆನಪಿಸಿಕೊಳ್ಳುವಂತೆ ಅಮರತ್ವವನ್ನು ಪಡೆಯಬಲ್ಲ ಎಂಬುದನ್ನೂ ಉಪನಿಷತ್ತು ಸೂಚ್ಯವಾಗಿ ತಿಳಿಸುತ್ತದೆ. ಆಸೆ, ಹೆದರಿಕೆ ಮತ್ತು ದುಃಖವನ್ನು ಮೀರಿ ಮನುಷ್ಯ ತನ್ನ ಮನಃ ಶಾಂತಿಯನ್ನು ಹೇಗೆ ಹೊಂದಬಹುದೆಂಬುದನ್ನು ಕಠೋಪನಿಷತ್ತಿನಿಂದ ತಿಳಿದುಕೊಳ್ಳಬಹುದಾಗಿದೆ.” ಎಂದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಕರ ಶ್ಯಾನುಭೋಗ್ ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿ, ಮಿತ್ರಪ್ರಭಾ ಹೆಗ್ಡೆ ವಂದಿಸಿದರು.