ಬಲ್ಲಡಿಚಂಡ ಕಸ್ತೂರಿ ಸೋಮಯ್ಯನವರು ಹೈಸೊಡ್ಲೂರು ಗ್ರಾಮದ ಬಲ್ಯಮೀದರಿರ ಅಪ್ಪಯ್ಯ ಮತ್ತು ಚೋಂದಮ್ಮ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುದಿಕೇರಿಯಲ್ಲಿ ಮುಗಿಸಿದ್ದಾರೆ. ಬಳಿಕ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ.ಯವರೆಗೆ ಮುಂದುವರಿಸಿದ್ದಾರೆ. ಮುಂದೆ ಕಾವೇರಿ ಕಾಲೇಜು ಗೋಣಿಕೊಪ್ಪಲಿನಲ್ಲಿ ಬಿ.ಎ. ಪದವಿ ಪಡೆದ ನಂತರ ಡಿ.ಎಡ್., ಬಿ.ಎಡ್. ತರಬೇತಿಗಳನ್ನು ಸರ್ವೋದಯ ಮಹಾ ವಿದ್ಯಾಲಯ ವಿರಾಜಪೇಟೆಯಲ್ಲಿ ಸಂಪೂರ್ಣಗೊಳಿಸಿದ್ದಾರೆ. ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮ್ಯಾನೇಜೆಂಟ್ ಚೆನ್ನೈಯಲ್ಲಿ ಡಿ.ಇಡಿವರೆಗೆ ವಿದ್ಯಾಬ್ಯಾಸ ಮಾಡಿದ್ದಾರೆ. ವೃತ್ತಿಯಿಂದ ಪ್ರಸ್ತುತ ಸಂತ ಅಂತೋಣಿ ಶಾಲೆ ಪೊನ್ನಂಪೇಟೆಯಲ್ಲಿ ಕಳೆದ 27ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೂರ್ವದಲ್ಲಿ ಶ್ರೀಮಂಗಲ ಪ್ರೌಢಶಾಲೆ ಮತ್ತು ಸರ್ವದೈವತಾ ಶಾಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಓದು, ಗಾಯನ, ಹಾಡು ರಚನೆ ಹಾಗೂ ಲೇಖನ ಪ್ರಬಂಧ ರಚನೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.
ದಿನಾಂಕ 23-07-2023ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ “ಕೊಡವ ತಕ್ಕ್ ಎಳ್ತ್‌ಕಾರಡ ಕೂಟ”ದ ಇಪ್ಪತೈದನೆಯ ವರ್ಷಾಚರಣೆಯ (ಬೊಳ್ಳಿನಮ್ಮೆ) ಸಮಾರಂಭದಲ್ಲಿ ಇವರ ‘ನಂಗ ಕೊಡವ’, ‘ಕೊಡವಾಮೆಲ್ ಪೊಂಗ’, ‘ಕಸ್ತೂರಿರ ಕವನ’ ಎಂಬ ಮೂರು ಕೃತಿಗಳು ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಲಾಗಿದೆ. ಕೊಡವ ಜಾನಪದ ನೃತ್ಯದ ಉಮ್ಮತ್ತಾಟ್ ಪ್ರಕಾರದ ತರಬೇತಿದಾರರಾಗಿದ್ದು, ಹಲವಾರು ತಂಡಗಳಿಗೆ ಶಾಲಾ ಕಾಲೇಜು ಮತ್ತು ಸಾರ್ವಜನಿಕ ವಲಯದಲ್ಲಿ ತರಬೇತಿ ನೀಡಿರುತ್ತಾರೆ. ವಾಲಗತ್ತಾಟ್ ಮತ್ತು ಉಮ್ಮತ್ತಾಟ್ ತೀರ್ಪುಗಾರಾಗಿ ಹಾಗೂ ನಿರೂಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿಯ ಸಂಚಾಲಕಿಯಾಗಿ ಹಾಗೂ ಕೊಡವ ಸಮಾಜ ಒಕ್ಕೂಟ ಬಾಳುಗೋಡು ಇಲ್ಲಿನ ಸಾಂಸ್ಕೃತಿಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಡವ ಮತ್ತು ಕನ್ನಡ ಪರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನೇಕ ಸ್ಥಳಗಳಲ್ಲಿ ನೀಡಿರುತ್ತಾರೆ. ಇವರ ಲೇಖನಗಳು ಬ್ರಹ್ಮಗಿರಿ ವಾರ ಪತ್ರಿಕೆ ಮತ್ತು ಕಾವೇರಿ ಟೈಮ್ಸ್ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಪೊಂಗಡ ಪಾತ್ರ” ಪ್ರಬಂಧ ರಚನೆಗೆ ಸನ್ಮಾನಿತರಾಗಿದ್ದರೆ.
“ಸಾಹಿತ್ಯ ಭಾಷೆಯ ಜೀವಾಳವಾಗಿರುವುದರಿಂದ ಸಾಹಿತಿಗಳು ಕುಟುಂಬ, ಸಂಸ್ಕೃತಿ, ಆಚಾರ ವಿಚಾರ, ಪದ್ಧತಿ ಪರಂಪರೆಯ ದೃಷ್ಟಿಯಲ್ಲಿ ಸಾಹಿತ್ಯವನ್ನು ರಚಿಸುವುದು ಅತ್ಯವಶ್ಯಕವಾಗಿದೆ. ಭಾಷೆ ಮತ್ತು ಸಂಸ್ಕೃತಿ ನಾಡಿನ ಜೀವಾಳವೇ ಆಗಿರುವುದರಿಂದ ಭಾಷೆಯ ಪುನಶ್ಚೇತನ ಮತ್ತು ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗುವ ಸಾಹಿತ್ಯದ ರಚನೆ ಅತ್ಯವಶ್ಯಕ. ಸಾಹಿತಿಗಳು ನಾಡು ಮತ್ತು ದೇಶದ ಹಿತದೃಷ್ಟಿಯಿಂದ ಸಾಹಿತ್ಯ ರಚಿಸಿದರೆ ತಮ್ಮ ಸಾಹಿತ್ಯ ಗೆಲ್ಲುವುದರಲ್ಲಿ ಎರಡು ಮಾತಿಲ್ಲ. ಸಮಾಜದಲ್ಲಿ ಸಹನೆ, ಸಹಕಾರ, ಸೌಹಾರ್ದತೆ, ತ್ಯಾಗ ಮುಂತಾದವುಗಳು ಬಹಳ ಅವಶ್ಯಕ ಎಂಬುದನ್ನು ತಮ್ಮ ಸಾಹಿತ್ಯದಲ್ಲಿ ಪ್ರತಿಬಿಂಬಿಸುವ ಹಾಗಿರಬೇಕು. ಭಾಷೆಗೆ ಎಲ್ಲೂ ಧಕ್ಕೆ ಬರದಂತೆ ನೋಡಿಕೊಳ್ಳುವುದು ಹಾಗೂ ತಮ್ಮ ಸಾಹಿತ್ಯದಲ್ಲಿ ತನ್ನ ನಾಡಿನ ನೆಲದ ಸಾರವನ್ನು ಮತ್ತು ದೇಶದ ಮೌಲ್ಯವನ್ನು ಸಾರುವಂತಿರಬೇಕು” ಎಂದು ಇಂದಿನ ಸಾಹಿತ್ಯಾಸಕ್ತರಿಗೆ ಕಿವಿಮಾತುಗಳನ್ನು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಕೊಡವ ಮತ್ತು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಡುವುದೇ ನನ್ನ ಜೀವನದ ಉದ್ದೇಶ ಎಂದು ಹೇಳಿಕೊಳ್ಳುತ್ತಾರೆ. ಪತಿ ಬಲ್ಲಡಿಚಂಡ ರತನ್ ಸೋಮಯ್ಯ ಗಂಡು ಮತ್ತು ಹೆಣ್ಣು ಸೇರಿ ಒಟ್ಟು ಎರಡು ಮಕ್ಕಳೊಂದಿಗೆ ಪೊನ್ನಂಪೇಟೆಯ ಭಗವತಿ ನಗರದಲ್ಲಿ ವಾಸವಾಗಿರುವ ಇವರ ಮುಂದಿನ ಬದುಕು ಬರಹಗಳು ಯಶಸ್ವಿಯಾಗಿ ಜನಾನುರಾಗಿಯಾಗಲೆಂದು ಹಾರೈಸೋಣ.
– ವೈಲೇಶ್ ಪಿ.ಎಸ್. ಕೊಡಗು (8861405738 ದೂರವಾಣಿ)
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.