‘ನೆಲ್ಚಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಮಲ್ಲಂಡ ಶೃತಿಯ ಮುದ್ದಪ್ಪ ಇವರು ಮೂಲತಃ ಪೊನಂಪೇಟೆಯ ಬೇಗೂರಿನ ಮಲ್ಲಂಡ ಮುದ್ದಪ್ಪ ಮತ್ತು ದೇವಕಿ ದಂಪತಿಯ ಮಗಳು. ತಂದೆಯವರು ನೌಕರಿಯ ಸಲುವಾಗಿ ವಿರಾಜಪೇಟೆಯಲ್ಲಿ ಇದ್ದಾಗ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಸರಕಾರಿ ಶಾಲೆಯಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣವನ್ನು ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ಕಲಿತಿದ್ದಾರೆ. ಪದವಿಪೂರ್ವ ಶಿಕ್ಷಣವನ್ನು ಮಾದಾಪುರದ ಚೆನ್ನಮ್ಮ ಕಾಲೇಜಿನಲ್ಲಿಯೂ, ಬಿ.ಕಾಂ. ಪದವಿಯನ್ನು ಸೋಮವಾರಪೇಟೆಯ ಬಿ.ಟಿ.ಸಿ.ಜಿ. ಕಾಲೇಜಿನಲ್ಲಿ ಮುಗಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಕಥೆ, ಕವನ, ಶಾಯಿರಿ, ಬರವಣಿಗೆ, ಓದು, ಭಾಷಣ, ಮಕ್ಕಳಿಗೆ ಉಮ್ಮತಾಟ್ ಕಲಿಸುವುದು ಇತ್ಯಾದಿ ಗೀಳು ಅಂಟಿಸಿಕೊಂಡವರು. ಮುಂದುವರಿದು ಕಥೆ, ಕವನ ಮತ್ತು ಲೇಖನಗಳನ್ನು ಕೊಡವ ಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಬರೆದಿದ್ದಾರೆ.
ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಇಪ್ಪತೈದನೆಯ ವರ್ಷಾಚರಣೆಯ (ಬೊಳ್ಳಿನಮ್ಮೆ) ಸಂದರ್ಭದಲ್ಲಿ ಇವರ ‘ಪೊಣ್ಣ್ ಜನ್ಮ’ ಎಂಬ ಮೊದಲ ಕೃತಿಯು ಕೂಟದ ಜನಪ್ರಿಯ ಸಾಹಿತ್ಯ ಮಾಲೆಯ 181ನೆಯ ಪುಸ್ತಕವಾಗಿ ಕೂಟದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಲಾಗಿದೆ. ಇವರ ಮತ್ತೊಂದು ‘ರಿಯಲ್ ಸ್ಟೋರಿ ಆಫ್ ಸೋಲ್ಜರ್’ ಎಂಬ ಕಥಾಸಂಕಲನದ ಕೆಲಸ ನಡೆಯುತ್ತಿದೆ. ‘ನೆಲ್ಚಿ ಎಂಟರ್ಪ್ರೈಸಸ್, ಪಾರ್ಲರ್ ಮತ್ತು ಬೋಟಿಕ್’ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ ಇತರ ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ವಾಟ್ಸಪ್‌ನ ಹಲವಾರು ಗುಂಪುಗಳಲ್ಲಿ ಪ್ರತಿದಿನ ಕೊಡವ ಭಾಷೆಯಲ್ಲಿ ಶುಭಾಷಿತವನ್ನು ಹೋಲುವ ಬರೆಹಗಳನ್ನು ಬರೆಯುತ್ತಿದ್ದರು. ಪೂಮಾಲೆ ಪತ್ರಿಕೆ, ಕಾವೇರಿ ಟೈಮ್ಸ್ ದಿನಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕೊಡವ ಸಾಹಿತ್ಯ ಅಕಾಡೆಮಿಯು ಹೊರತರುತ್ತಿರುವ ‘ಪೊಂಗುರಿ’ ಪುಸ್ತಕದಲ್ಲಿ ಇವರ ಕಥೆ, ಕವಿತೆ ಮತ್ತು ಲೇಖನಗಳು ಪ್ರಕಟಗೊಂಡಿವೆ. ಅಂತರ್ಜಾಲದ ಇನ್ಸ್ಟಾಗ್ರಾಂನ ಪುಟದಲ್ಲಿ ಕೊಡವ ಭಾಷೆಯಲ್ಲಿ ಶಾಯರಿಗಳನ್ನು ಹಂಚಿಕೊಂಡಿದ್ದಾರೆ. ಇವರು ಹಲವಾರು ವೇದಿಕೆಯ ಮೂಲಕ ‘ನಮ್ಮ ಹಿಂದಿನ ಪದ್ಧತಿ ಪರಂಪರೆ’ಯ ಕುರಿತು ತನ್ನ ಮಕ್ಕಳನ್ನು ಜೊತೆಗೂಡಿಸಿಕೊಂಡು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇವರ ‘ನೆಲ್ಚಿ ಎಂಟರ್ಪ್ರೈಸಸ್’ ಮೂಲಕ ನಡೆಸುವ ಅಕಾಡೆಮಿ ತರಗತಿಯ ಮೂಲಕ ಕಲಿತ 6 ಮಹಿಳೆಯರು ಸ್ವ-ಉದ್ಯೋಗ ಪ್ರಾರಂಭಿಸಿದ್ದಾರೆ. ಮುಂದೆಯೂ ಕಲಿಯಲು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಎಲ್ಲಾ ರೀತಿಯ ಅವಕಾಶಗಳನ್ನು ಮಾಡಿಕೊಡಲಾಗುತ್ತದೆ ಎಂದು ಹೇಳಿಕೊಳ್ಳುತ್ತಾರೆ.
‘ತಿಂಗಕೋರ್ ಮೊಟ್ಟ್’ ಹೆಸರಿನಲ್ಲಿ ಹಲವಾರು ಮಕ್ಕಳಿಗೆ ಕೊಡವ ಜಾನಪದ ನೃತ್ಯ ‘ಉಮ್ಮತಾಟ್’ ಕಲಿಸುತ್ತಿದ್ದಾರೆ. ‘ತಿಂಗಕೋರ್ ಮೊಟ್ಟ್ ತಲೆಕಾವೇರಿ’ ಎಂಬ ಬಳಗದಿಂದ ಮಡಿಕೇರಿ ಆಕಾಶವಾಣಿಯಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಅಂತರ್ಜಾಲದ ಆನ್ಲೈನ್ ಕಾರ್ಯಕ್ರಮಗಳಲ್ಲಿ ಕವನ ವಾಚನ ಮಾಡಿದ್ದಾರೆ. “ಮೊಬೈಲಿನಿಂದ ಹೊರಗೆ ಬನ್ನಿ. ಪುಸ್ತಕಗಳನ್ನು ಕೊಂಡು ಓದಿ. ಮೊಬೈಲ್ ನಮ್ಮ ಜ್ಞಾನವನ್ನು ಕಿತ್ತುಕೊಳ್ಳುತ್ತಿದೆ. ಪೋಷಕರು ತಮ್ಮ ಮೊಬೈಲ್ ಗೀಳನ್ನು ಬಿಟ್ಟು ಮಕ್ಕಳೊಂದಿಗೆ ದಿನಕ್ಕೆ ಕನಿಷ್ಠ ಒಂದು ಗಂಟೆಯಷ್ಟು ಸಮಯವನ್ನಾದರೂ ಕಳೆಯಬೇಕು. ಇದರಿಂದ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ” ಎಂದು ಇಂದಿನ ಸಾಹಿತ್ಯದ ಆಸಕ್ತಿ ಬೆಳಸಿಕೊಂಡವರಿಗೆ ಕಿವಿಮಾತು ಹೇಳುತ್ತಾರೆ. ಗೋಣಿಕೊಪ್ಪಲಿನಲ್ಲಿ ಓದುತ್ತಿರುವ ಒಂದು ಗಂಡು ಮತ್ತು ಒಂದು ಹೆಣ್ಣುಮಕ್ಕಳೊಂದಿಗೆ ವ್ಯವಹಾರದ ಜೊತೆಗೆ ಮಕ್ಕಳನ್ನು ಸಹ ತಮ್ಮ ಸಾಹಿತ್ಯದ ಪಯಣದಲ್ಲಿ ಜೊತೆಯಾಗಿಸಿಕೊಂಡಿದ್ದಾರೆ. ಪ್ರಸ್ತುತ ಗೋಣಿಕೊಪ್ಪಲಿನಲ್ಲಿ ವಾಸವಿರುವ ಇವರ ಮುಂದಿನ ಬದುಕು ಬರೆಹಗಳು ಏಳ್ಗೆಯಾಗಿ ಜನಾನುರಾಗಿಯಾಗಲೆಂದು ಹಾರೈಸೋಣ.
– ವೈಲೇಶ್ ಪಿ.ಎಸ್. ಕೊಡಗು (8861405738 ದೂರವಾಣಿ)
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.