ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಇವರು ಶ್ರೀಮಂಗಲ ನಾಡು ನಾಲ್ಕೇರಿ ಗ್ರಾಮದ ಚೆಪ್ಪುಡಿರ ಮುದ್ದಪ್ಪ (ಸನ್ನು) ನಳಿನಿ ದಂಪತಿಗಳ ಪುತ್ರಿ. ಎಂ.ಎ., ಬಿ.ಇಡಿ., ಯು.ಜಿ.ಸಿ., ಎನ್.ಇ.ಟಿ., ಎಂ.ಫಿಲ್.ನೊಂದಿಗೆ ಇತ್ತೀಚೆಗೆ ತಾನೆ ಹಂಪಿ ವಿಶ್ವವಿದ್ಯಾಲಯದ ಜನಪದ ವಿಭಾಗದಲ್ಲಿ ‘ಕೊಡಗಿನ ತೆರೆ ಕಟ್ಟುವ ಆಚರಣೆಗಳ ವಿಶ್ಲೇಷಣೆ’ ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪದವಿಯನ್ನೂ ಪಡೆದಿರುತ್ತಾರೆ. ವೀರಾಜಪೇಟೆಯ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿ ಇದೀಗ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 2011ನೆಯ ಸಾಲಿನ ಫೆಲೋಶಿಪ್ ಪಡೆದಿರುತ್ತಾರೆ. ಪ್ರವೃತ್ತಿಯಲ್ಲಿ ‘ತೂಕ್ ಮೊಳಕ್’ ಕೊಡವ ವಾರಪತ್ರಿಕೆಯ ಉಪ ಸಂಪಾದಕಿಯಾಗಿದ್ದಾರೆ.
‘ಕೊಡವ ಜನಪದ ನೃತ್ಯಗಳು’ ಸಂಶೋಧನಾ ಕೃತಿ, ‘ನೆಲಂಜಪ್ಪೆ’ ಕೊಡವ ಭಾಷೆಯ ಕವನ ಸಂಕಲನ ಲೋಕಾರ್ಪಣೆ ಮಾಡಿರುತ್ತಾರೆ. ಕವನ, ಲೇಖನ, ಸಂಶೋಧನಾ ಬರಹ ಹಾಗೂ ಚುಟುಕು ರಚನೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ನಾಟಕ ರಚನೆ ಮತ್ತು ಪ್ರದರ್ಶನ, ಕನ್ನಡ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಬಸವಣ್ಣ ಸೇರಿದಂತೆ ಹಲವು ಪ್ರಮುಖ ವಚನಕಾರರ ವಚನಗಳ ಕೊಡವ ಭಾಷಾ ಅನುವಾದ ಹಾಗೂ ಕನಕದಾಸರ ಸಾಹಿತ್ಯ ಅನುವಾದ ಯೋಜನೆಯಲ್ಲಿ ಅನುವಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಈಶಾನ್ಯ ಭಾರತ ಲೇಖಕಿಯರ ಸಮ್ಮೇಳನ, ಕರ್ನಾಟಕ ಸರ್ಕಾರ ಆಯೋಜಿತ ಭಾಷಾ ಸೌಹಾರ್ದ ದಿನಾಚರಣೆ ಸೇರಿದಂತೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ‘ಜಡಿ ಮಳೆ’ ಕೊಡವ ಭಾಷೆಯ ಚಲನಚಿತ್ರಕ್ಕೆ ಗೀತಸಾಹಿತ್ಯ ರಚಿಸಿರುವ ಇವರ ಕೊಡವ ಭಾಷೆಯ ಗೀತೆಗಳು ಮಡಿಕೇರಿ ಆಕಾಶವಾಣಿಯ ‘ಉದಯರಾಗ’ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿವೆ.
ಪ್ರಸ್ತುತ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿರುವ ಇವರು ಕರ್ನಾಟಕ ಸರ್ಕಾರದ ಕನ್ನಡ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕ್ರಿಯಾಶೀಲ ಸದಸ್ಯರಾಗಿದ್ದು, ಅಕಾಡೆಮಿಯ ಹಲವು ಸಾಹಿತ್ಯಪರ ಕಾರ್ಯಗಳ ಸಂಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿ.ವಿ.ಯ ಕೊಡವ ಭಾಷಾ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ಜಾನಪದ ವಿ.ವಿ.ಯ ಜನಪದ ಕಲೆಗಳ ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ವಿಭಾಗದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರ ಬಸವಣ್ಣನವರ ವಚನಗಳ ಕೊಡವ ಭಾಷೆ ಅನುವಾದ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸಂತ ಕವಿ ಕನಕದಾಸ ಸಾಹಿತ್ಯ ಅನುವಾದ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 2010ರಲ್ಲಿ ಜೇ.ಸಿ.ಐ. ಆಂದೋಲನಕ್ಕೆ ಸೇರ್ಪಡೆಗೊಂಡು 2012ರಲ್ಲಿ ಜೇ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಜೇಸಿರೇಟ್ ಅಧ್ಯಕ್ಷರಾಗಿ, 2013ರಲ್ಲಿ ಭಾರತೀಯ ಜೇಸೀಸ್‌ನ ವಲಯ ಸಂಯೋಜಕಿಯಾಗಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಮುಲ್ಲೇಂಗಡ ಮಧೋಶ್ ಪೂವಯ್ಯರವರ ಬಾಳಸಂಗಾತಿಯಾದ ಇವರು ತಮ್ಮ ಮಕ್ಕಳಾದ ದರ್ಶನ್ ಸುಬ್ಬಯ್ಯ, ಮಮತ ದೇಚಕ್ಕ ಹಾಗೂ ಮಾವ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮತ್ತು ಅತ್ತೆ ಮುಲ್ಲೇಂಗಡ ಬೇಬಿ ಚೋಂದಮ್ಮ ಇವರೊಂದಿಗೆ ತುಂಬು ಕುಟುಂಬ ಜೀವನ ನಡೆಸುತ್ತಿದ್ದಾರೆ. ಅಧ್ಯಯನಶೀಲತೆಯೇ ಸಾಹಿತಿಯ ಜೀವಾಳ, ಓದುವ ಹವ್ಯಾಸ ಬೆಳೆಸಿಕೊಳ್ಳಿ, ಉತ್ತಮ ಓದು ಉತ್ಕೃಷ್ಟ ಬರಹಗಳಿಗೆ ಪೂರಕವಾದುದು, ಬರೆದರೆ ಸಾಲದು ಬರೆದಂತೆ ಬದುಕಿನಲ್ಲಿ ನಡೆಯಬೇಕು, ನಡೆ-ನುಡಿ ಒಂದಾಗಿರಲಿ ಎಂಬುದು ಯುವ ಸಾಹಿತಿಗಳಿಗೆ ಇವರ ಕಿವಿಮಾತು.
ವೈಲೇಶ್ ಪಿ.ಎಸ್. ಕೊಡಗು