ಮಂಗಳೂರು : ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗವು ಆಯೋಜಿಸಿದ್ದ ಕವಿ ಸಮಯ ಕಾರ್ಯಕ್ರಮವು ದಿನಾಂಕ 01-05-2024ರಂದು ವಿಶ್ವವಿದ್ಯಾನಿಲಯದ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸ್ಮೃತಿ ಅಮೃತರಾಜ್ “ಅನುಭವವನ್ನು ಅನುಭಾವಕ್ಕೆ ಇಳಿಸಿದಾಗ ಕವಿತೆ ಹುಟ್ಟಿಕೊಳ್ಳುತ್ತದೆ. ಏಕಾಂತದಲ್ಲಿ ಹುಟ್ಟಿದ ಕವಿತೆ ಲೋಕಾಂತಕ್ಕೆ ನೀಡಿದ ಮೇಲೆ ಅದರ ಕುರಿತು ಮಾತನಾಡುವುದು ಅನಾವಶ್ಯಕ. ಬದುಕಿನಲ್ಲಿ ಕಾಡಿದ, ಅನುಭವಕ್ಕೆ ಸಿಕ್ಕ ಭಾವನೆಗಳ ಸಣ್ಣ ಎಳೆಯೇ ಕವಿತೆಯಾಗಿ ಹೊರಹೊಮ್ಮುತ್ತದೆ.” ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸಹನಾ ಕಾಂತಬೈಲು ಮಾತನಾಡಿ “ಬರಹಗಾರನಿಗೆ ಬರವಣಿಗೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂಬುದು ಮೊದಲ ಆದ್ಯತೆಯಾಗಿರಬೇಕಾಗುತ್ತದೆ. ಬರವಣಿಗೆಯ ಹುಟ್ಟು ಎಂದಿಗೂ ಅಂತರಂಗದ ಪ್ರಕ್ರಿಯೆಯಾಗಿದೆ.” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ್ ಎಂ. ಕೆ., ಕನ್ನಡ ಸಂಘದ ಸಂಯೋಜಕ ಡಾ. ನಾಗೇಶ್, ವಿಭಾಗದ ಉಪನ್ಯಾಸಕರಾದ ಡಾ. ಮಧು ಬಿರಾದಾರ್, ಡಾ. ಶೈಲಾ, ಡಾ. ಅಶ್ವಿನಿ, ಡಾ. ವೆಂಕಟೇಶ್ ಉಪಸ್ಥಿತರಿದ್ದರು.