ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕವನ ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ದಿನಾಂಕ 03 ಜನವರಿ 2026ರಂದು ಎಸ್.ಡಿ.ಎಂ. ಕಾನೂನು ಕಾಲೇಜಿನ ಸಭಾಗೃಹದಲ್ಲಿ ಬಿಡುಗಡೆಗೊಂಡಿತು.
ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, “ಜಯಲಕ್ಷ್ಮೀ ಇವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಅಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದುಃಖವೂ ಆಗುತ್ತಿದೆ. ಮುಂಬಯಿಯಲ್ಲಿ ಸಕ್ರಿಯ ಪತ್ರಕರ್ತರಾಗಿರುವ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ, ಅಲ್ಲಿನ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿ ನಾನು. ಅಲ್ಲಿನವರ ನಾಡಪ್ರೇಮ ಶ್ಲಾಘನೀಯ” ಎಂದು ಹೇಳಿದರು.
ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಸಾಹಿತಿ, ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ, “ಎರಡು ದಶಕಗಳ ನಂತರ ಮತ್ತೆ ಶ್ರೀನಿವಾನ ಜೋಕಟ್ಟೆ ಇವರ ಜೊತೆ ವೇದಿಕೆಯಲ್ಲಿದ್ದೇನೆ. ಆದರೆ ಇಂದು ಖುಷಿ ನೋವು ಎರಡೂ ಜೊತೆಗಿದೆ. ಜಯಲಕ್ಷ್ಮೀಯವರ ಎಲ್ಲ ಕವಿತೆಗಳನ್ನು ಓದಿ ಬರೆಯುವೆ. ನಾವು ಬದುಕಿನಲ್ಲಿನ ನೋವನ್ನು ಮರೆತು ದೃಢ ಮನಸ್ಸು ಕಾಪಾಡಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ನಮ್ಮ ಎದುರಿಗಿದೆ. ಮುಂದಿನ ದಿನಗಳು ಆಶಾದಾಯಕವಾಗಿರಲಿ” ಎಂದು ಹಾರೈಸುವೆ ಎಂದರು.

ಜಯಲಕ್ಷ್ಮೀ ಜೋಕಟ್ಟೆಯವರ ‘ಕವಿತೆಗಳು’ ಕೃತಿಯ ಸಂಪಾದಕರಾದ ಅವರ ಪತಿ ಶ್ರೀನಿವಾಸ ಜೋಕಟ್ಟೆ ಮಾತನಾಡಿ, “ಏಳೆಂಟು ವರ್ಷ ಕವಿತಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಜಯಲಕ್ಷ್ಮೀಯವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಕವನಗಳನ್ನು ಪ್ರಕಟಿಸಿದ್ದರು. ಅವರು ತಾವು ಬರೆದಂತೆ ಕವಿತೆಗಳನ್ನು ವಿಮರ್ಶಕಿ ಸುನಂದಾ ಪ್ರಕಾಶ ಕಡಮೆ ಅವರಿಗೆ ಪ್ರತಿಕ್ರಿಯೆಗಾಗಿ ಕಳುಹಿಸುತ್ತಿದ್ದರು. ಸುನಂದಾ ಕಡಮೆ ಅವರು ಆ ಕವನಗಳನ್ನು ಕಂಪ್ಯೂಟರ್ ನಲ್ಲಿ ಡಿಲೀಟ್ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರಿಂದಲೇ ಈ ಕವಿತಾ ಸಂಕಲನ ಹೊರಬರಲು ಸಾಧ್ಯವಾಯಿತು ಎನ್ನುತ್ತಾ, ನಂತರ ಜಯಲಕ್ಷ್ಮಿಯವರು ತಮ್ಮ ಕವಿತಾ ರಚನೆ ನಿಲ್ಲಿಸಿ ನನ್ನ ಬರಹಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾ ಬಂದರು” ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, “ಅನುಭವದ ಮೂನೆಯಿಂದ ಮೂಡಿಬಂದಂತಹ ಕವಿತಾ ರಚನೆಗಳು ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಜಯಲಕ್ಷ್ಮೀ ಅವರು ಕವನ ಸಂಕಲನ ತರಬೇಕು ಎಂದು ಬರೆದವರಲ್ಲ. ಹಾಗಾಗಿ ಅವರ ಕವನಗಳು ಗಟ್ಟಿತನವನ್ನು ಉಳಿಸಿಕೊಂಡಿವೆ. ಮುಂಬಯಿಯಲ್ಲಿ ಕನ್ನಡ ಸದಾ ಜೀವಂತವಾಗಿರಲು ವಿಶ್ವವಿದ್ಯಾಲಯ ಕನ್ನಡ ವಿಭಾಗ ಸಹಿತ ಅನೇಕ ಸಂಘ ಸಂಸ್ಥೆಗಳು ಶ್ರಮಿಸುತ್ತಾ ಬರುತ್ತಿವೆ. ಕನ್ನಡ ಮಾಸಿಕ ಮುಖವಾಣಿಗಳನ್ನು ತರುತ್ತಿವೆ. ನಾನೂ ಅನೇಕ ಬಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತೇನೆ. ಮುಂಬಯಿಯವರ ಕನ್ನಡ ಪ್ರೇಮವನ್ನು ನಾನಿಲ್ಲಿ ನೆನಪಿಸಿಕೊಳ್ಳುವೆ ಅನ್ನುತ್ತಾ, ಶ್ರೀನಿವಾಸ ಜೋಕಟ್ಟೆಯವರು ಬದುಕಿನಲ್ಲಿ ತಮಗಾದ ನೋವನ್ನು ಮರೆತು ಮುಂದೆ ಇನ್ನಷ್ಟು ಸಾಹಿತ್ಯ ವಲಯದಲ್ಲಿ ಸಕ್ರಿಯರಾಗಬೇಕು ಎಂದು ಹಾರೈಸುತ್ತೇನೆ” ಎಂದರು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಎಸ್. ರೇವಣಕರ್ ಅವರು ಚೊಚ್ಚಲ ಕವಿತಾಸಂಕಲನಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಜಯಲಕ್ಷ್ಮೀ ಅವರ ಮದುಬನ ಮಳೆಗಾನ ಎಂಬ ಕವಿತೆಯನ್ನು ಹಳೆಮನೆ ರಾಜಶೇಖರ ಉಜಿರೆ ವಾಚನ ಮಾಡಿದರು. ಹಿರಿಯ ಪತ್ರಕರ್ತ ರೇಮಂಡ್ ಡಿ’ಕುನಾ ತಾಕೊಡೆ ಸ್ವಾಗತಿಸಿ, ಸಾಹಿತಿ ಅರುಣ ನಾಗರಾಜ ವಂದಿಸಿ, ವಿಮರ್ಶಕ ಹಳೆಮನೆ ರಾಜಶೇಖರ ಉಜಿರೆ ನಿರೂಪಿಸಿದರು.
