ಕಾರ್ಕಳ: ಖ್ಯಾತ ಸಾಹಿತಿ ಜಯಕೀರ್ತಿ ಯಚ್. ರಚಿಸಿದ ಸುಮಾರು ಅರುವತ್ತು ಕವನಗಳ ಸಂಕಲನ ‘ಕಾವ್ಯ ಕಲರವ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 26-05-2024ರಂದು ಕರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಜೈನ್ ಮಿಲನ್ ಕಾರ್ಕಳ ಇದರ ಮಾಸಿಕ ಸಭೆಯ ಸಂದರ್ಭದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜೈನ್ ಹೈಸ್ಕೂಲ್ ಮೂಡಬಿದ್ರೆ ಇದರ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಪ್ರಖ್ಯಾತ ವಾಗ್ಮಿಗಳಾದ ಶ್ರೀಯುತ ಮುನಿರಾಜ ರೆಂಜಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪುಸ್ತಕ ಲೋಕಾರ್ಪಣೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ಕವನಗಳು ಹೇಗೆ ವಿವಿಧ ಕವಿಗಳಿಂದ ಬರೆದು ಜೀವನಕ್ಕೆ ಮಾರ್ಗದರ್ಶಕವಾಗಿದೆ ಎಂಬುದನ್ನು ಹೇಳುತ್ತಾ ದ.ರಾ. ಬೇಂದ್ರೆ, ಕುವೆಂಪು, ಚೆನ್ನವೀರ ಕಣವಿ, ಡಿ. ವಿ. ಜಿ.ಯವರ ಕವನಗಳನ್ನು ಉಲ್ಲೇಖಿಸಿ ಮಾತನಾಡಿದರು. ‘ಕಾವ್ಯ ಕಲರವ’ ಕವನ ಸಂಕಲನವನ್ನು ಸಮ್ಯಕ್ ಶ್ರೀ ಪ್ರಕಾಶನದಡಿ ಪ್ರಕಟಿಸಿರುವ ಶ್ರೀಯುತ ಜಯಕೀರ್ತಿ ಇವರು ಕೆಲವು ಕವನಗಳನ್ನು ಓದಿ ಹೇಳಿದರಲ್ಲದೆ ಡಾ. ಎಚ್. ವಿ. ಚಂದ್ರಶೇಖರ್ ಬೆಂಗಳೂರು ಅವರು ಬರೆದ ಬೆನ್ನುಡಿಯಲ್ಲಿನ ವಿಚಾರಗಳನ್ನು ಪ್ರಸ್ತಾಪಿಸಿದರು. ಜೈನ್ ಮಿಲನ್ ಅಧ್ಯಕ್ಷರಾದ ಎಚ್. ಎಂ. ಅಶೋಕ್ ಅವರು ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು. ಜೈನ್ ಮಿಲನ್ ನಿರ್ದೇಶಕರಾದ ಶ್ರೀಯುತ ಯುವರಾಜ ಬಲಿಪ ಉಪಸ್ಥಿತರಿದ್ದರು.