ಚಾಮರಾಜನಗರ : ರಂಗಮಂಡಲ ಬೆಂಗಳೂರು ಮತ್ತು ರಂಗವಾಹಿನಿ ಚಾಮರಾಜನಗರ ಆಯೋಜಿಸಿರುವ ಪ್ರತಿ ಜಿಲ್ಲೆ ಹಾಗೂ ಹೊರನಾಡ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ 3ನೇ ಭಾನುವಾರ ಆಯೋಜಿಸುವ ಕವಿಗೋಷ್ಠಿ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 21-07-2024ರಂದು ಚಾಮರಾಜನಗರದ ಡಾ. ರಾಜಕುಮಾರ ರಂಗಮಂದಿರದಲ್ಲಿ ನಡೆಯಲಿದೆ.
ಚಾಮರಾಜನಗರದಲ್ಲಿ ಉದ್ಘಾಟನೆಗೊಳ್ಳಲಿರುವ ಜಿಲ್ಲಾ ಪ್ರಥಮ ಕವಿಗೋಷ್ಠಿಯ ಆರಂಭವು ದಿನಾಂಕ 20-07-2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಪಡಸಾಲೆಯಲ್ಲಿ ನಡೆಯಲಿದೆ. ನಾಡೋಜ ಬರಗೂರು ರಾಮಚಂದ್ರಪ್ಪ ಸಾರ್ ಅವರು ಕಾವ್ಯ ದೀವಟಿಗೆಯನ್ನು ಬೆಳಗುವುದರ ಮೂಲಕ ಯಾನ ಆರಂಭವಾಗಲಿದೆ. ಡಾ. ಧರಣಿದೇವಿ ಮಾಲಗತ್ತಿ ಮೇಡಂ ಅವರು ಆ ದೀವಟಿಗೆಯನ್ನು ಕವಿಗೋಷ್ಠಿಯ ಸರ್ವಾಧ್ಯಕ್ಷರಾದ ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಉದ್ಘಾಟಕರಾದ ಎಲ್.ಎನ್. ಮುಕುಂದರಾಜ್ ಅವರಿಗೆ ಹಸ್ತಾಂತರಿಸಲಿದ್ದಾರೆ. ನಂತರ ಯಾನ ಪ್ರಾರಂಭವಾಗಲಿದ್ದು, ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ಗಾಯಕರು ನಾಡಗೀತೆಯನ್ನು ಹಾಡಿ.. ಹಾಗೂ ನಾಡಿನ ಖ್ಯಾತ ಕವಿಗಳು ಕವಿತೆಗಳನ್ನು ವಾಚನ ಮಾಡಿ ಯಾನಕ್ಕೆ ಶುಭ ಕೋರಲಿದ್ದಾರೆ.
ದಿನಾಂಕ 21-07-2024 ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಚಾಮರಾಜನಗರದ ಡಾ. ರಾಜಕುಮಾರ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕಾವ್ಯ ಸಂಸ್ಕೃತಿ ಯಾನ’ದ ಪ್ರಥಮ ಕವಿಗೋಷ್ಠಿಯ ಉದ್ಘಾಟನೆಯನ್ನು ಸಾಂಸ್ಕೃತಿಕ ಚಿಂತಕರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಆದ ಸನ್ಮಾನ್ಯ ಪ್ರೊ. ಎಲ್.ಎನ್. ಮುಕುಂದರಾಜ್ ಅವರು ನೆರವೇರಿಸಲಿದ್ದಾರೆ. ಸರ್ವಾಧ್ಯಕ್ಷರಾಗಿ ಖ್ಯಾತ ಕವಿಗಳಾದ ಸನ್ಮಾನ್ಯ ಡಾ. ಮುಡ್ನಾಕೂಡು ಚಿನ್ನಸ್ವಾಮಿಯವರು ಗೋಷ್ಟಿಯನ್ನು ಮುನ್ನಡೆಸಲ್ಲಿದ್ದಾರೆ.
ಬೆಳಿಗ್ಗೆ 11-30ರಿಂದ ಮಂಜು ಕೋಡಿ ಉಗನೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಧ್ಯಾಹ್ನ 2-00ರಿಂದ ಡಾ. ಮಹೇಂದ್ರ ಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಬಳಿಕ ಸರ್ವಾಧ್ಯಕ್ಷರೊಂದಿಗೆ ಸಂವಾದ ಹಾಗೂ ಸಂಜೆ ಗಂಟೆ 5-15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ‘ಕಾವ್ಯ ಸಂಸ್ಕೃತಿ ಯಾನ’ದ ಕಾವ್ಯ ದಿವಟಿಗೆಯನ್ನು ಬೆಳಗಲು ತಾವೆಲ್ಲರೂ ಕೈಜೋಡಿಸಿ, ಯಾನವನ್ನು ಮುಂದುವರಿಸಲು ನಿಮ್ಮ ಸಹಕಾರ ಇರಲಿ.