ಕುಶಾಲನಗರ: ಬೆಂಗಳೂರಿನ ರಂಗಮಂಡಲ ಹಾಗೂ ಕೊಡಗು ಕವಿ ಬಳಗ ಜಂಟಿಯಾಗಿ ಆಯೋಜಿಸಿದ ಕೊಡಗು ‘ಕಾವ್ಯ ಸಂಸ್ಕೃತಿ ಯಾನ’ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025ರಂದು ಕುಶಾಲನಗರದ ಕೂದ್ದೂರು ಗ್ರಾಮದ ಪೂರ್ಣಚಂದ್ರ ಕುಟೀರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಮಾತನಾಡಿ “ಕವಿತೆಯನ್ನು ಕೇಳುವ ಸಹೃದಯರ ಕೊರತೆ ಉಂಟಾಗಿರುವುದು ವಿಷಾದನೀಯ. ಕವಿತೆಗಳು ಜನರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಒಡಮೂಡಿಸುತ್ತವೆ. ಮಾಧ್ಯಮಗಳು ಕಾವ್ಯಗಳನ್ನು ಜನರಿಂದ ದೂರ ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಕಾವ್ಯ ರಂಗದಲ್ಲಿ ಒಂದಷ್ಟು ಚಟುವಟಿಕೆಗಳು ಕಾಣುತ್ತಿವೆ. ಈ ಮೂಲಕ ನಾಡಿನೆಲ್ಲೆಡೆ ಇರುವ ಚುಟುಕು ಕವಿಗಳ ಸಮಾಗಮ ಹಾಗೂ ಸ್ನೇಹ ಸಂಗಮ ಸಾಧ್ಯವಾಗುತ್ತಿದೆ. ಇಂದಿನ ಆಧುನಿಕ ಕಾಲಘಟ್ಟದ ಬದಲಾದ ಪರಿಸ್ಥಿತಿಯಲ್ಲಿ ಆಧುನಿಕ ಕವಿಗಳು ಆಯಾಯ ಪರಿಸರ ಹಾಗೂ ಸಂದರ್ಭಗಳ ಕುರಿತು ರಚಿಸುವ ಕವನಗಳನ್ನು ವಾಚಿಸುವ ಸಂದರ್ಭ ಪರಂಪರೆಯ ಮರೆವು ಆಗದಂತೆ ಎಚ್ಚರ ವಹಿಸಬೇಕು. ಹೊಸ ಕವಿಗಳು ಹಾಗೂ ಕವಿತೆಗಳನ್ನು ಅಸ್ವಾದಿಸುವ ಕೆಲಸವಾಗಬೇಕು” ಎಂದು ಹೇಳಿದರು.
ಕಾವ್ಯ ಸಂಸ್ಕೃತಿ ಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕವಾಗಿ ಮಾತನಾಡಿ “ಕವಿತೆ ಜನಸಾಮಾನ್ಯರ ಧ್ವನಿ. ಅವರ ನೋವು ಹಾಗೂ ನಲಿವಿಗೆ ಸಂಜೀವಿನಿಯಾಗಿದೆ. ಸಾಮಾನ್ಯ ಜನರು ಸೇರಿದಂತೆ ಎಲ್ಲೆಡೆ ದುಡಿವ ಕೂಲಿ ಕಾರ್ಮಿಕರಲ್ಲೂ ಸೊಗಸಾದ ಕವಿತೆಗಳು ಮೂಡಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕವಿ ಹಾಗೂ ಕವಿತೆಗಳಿಗೆ ಸಿಗಬೇಕಾದ ಸೂಕ್ತ ಸ್ಥಾನ ಮಾನ ದೊರಕದಿರುವುದನ್ನು ಮನಗಂಡು ನಾಡಿನಾದ್ಯಂತ ಜನರೆಡೆಗೆ ಕಾವ್ಯ ಎನ್ನುವ ಘೋಷವಾಕ್ಯದೊಂದಿಗೆ ‘ಕವಿ ಕಾವ್ಯ ಸಂಸ್ಕೃತಿ ಯಾನ’ ಕೈಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾವ್ಯ ಯಾನ ಸಂಚರಿಸುತ್ತಿದೆ” ಎಂದರು.
‘ಕಾವ್ಯ ಸಂಸ್ಕೃತಿ ಯಾನ’ದ ಸರ್ವಾಧ್ಯಕ್ಷೆ ಸ್ಮಿತಾ ಆಮೃತರಾಜು, ರಾಮನಗರ ಜಿಲ್ಲೆಯ ‘ಕಾವ್ಯ ಯಾನ’ದ ಸರ್ವಾಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ, ಕೊಡಗು ಜಿಲ್ಲೆಯ ಹಿರಿಯ ಸಹಕಾರಿ ಟಿ. ಆರ್. ಶರವಣಕುಮಾರ್, ಹಿರಿಯ ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ, ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೆ. ಎಸ್. ಮೂರ್ತಿ, ರೋಹಿಣಿ ಶರವಣಕುಮಾರ್, ಮಧು ಆರ್ಯ, ಡಾ.ಟಿ.ಎನ್.ವಿವೇಕಾನಂದ, ಕೃಪಾ ದೇವರಾಜು, ನಾ. ಕನ್ನಡಿಗ, ಕಿಶೋರ್ ಕುಮಾರ್, ವೈಲೇಶ್, ಸಂಗೀತಾ ರವಿರಾಜ್, ಹಾ. ತಿ. ಜಯಪ್ರಕಾಶ್, ಹೇಮಂತ್ ಪಾರೆರಾ, ಶರ್ಮಿಳಾ ರಮೇಶ್, ರಂಜಿತಾ ಕವಲವಾರ, ರಾಣಿ ವಸಂತ್, ಲೀಲಾ ಕುಮಾರಿ ತೊಡಿಕಾನ, ಮಾಲಾ ಮೂರ್ತಿ, ರಮ್ಯಾ ಮೂರ್ನಾಡು, ಅನುಶ್ರೀ ಮೊದಲಾದ ಕವಿಗಳು ಕಾವ್ಯ ವಾಚಿಸಿದರು.
‘ಕಾವ್ಯ ಸಂಸ್ಕೃತಿ ಯಾನ’ ಕೊಡಗು ಜಿಲ್ಲಾ ಸಂಚಾಲಕಿ ಕೃಪಾ ದೇವರಾಜು ಕಾರ್ಯಕ್ರಮ ನಿರೂಪಿಸಿದರು. ಕೂಡೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ಬೆಂಗಳೂರಿನಿಂದ ಆಗಮಿಸಿದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಅವರಿಂದ ಕಾವ್ಯ ದೀವಟಿಗೆಯನ್ನು ಕಾವ್ಯ ಯಾನದ ಸರ್ವಾಧ್ಯಕ್ಷೆ ಸ್ಮಿತಾ ಅಮೃತರಾಜು ಸ್ವೀಕರಿಸಿದರು.
Subscribe to Updates
Get the latest creative news from FooBar about art, design and business.
Next Article ಲೋಕಾರ್ಪಣೆಗೊಂಡ ‘ಬೆಳಕು’ ಕವನ ಸಂಕಲನ