ಬೆಂಗಳೂರು : ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯಮಂಡಲ ಮತ್ತು ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇದರ ವತಿಯಿಂದ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ ಕಾರ್ಯಕ್ರಮವನ್ನು ದಿನಾಂಕ 15 ಫೆಬ್ರವರಿ 2026ರಂದು ಸಂಜೆ 6-00 ಗಂಟೆಗೆ ಬೆಂಗಳೂರು ವಿ.ವಿ.ಯ ಜ್ಞಾನ ಭಾರತಿ ಆವರಣ ಡಾ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರಿಂದ ‘ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ಯರ’ ಮಹಾ ಕಾವ್ಯ ಗಾಯನ ನಡೆಯಲಿದೆ. ಸಂಜೆ 6-00 ಗಂಟೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಲಂ ಹಾಡ್ಲಹಳ್ಳಿ ಇವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಎಚ್. ಲಕ್ಷ್ಮೀ ನಾರಾಯಣ ಸ್ವಾಮಿ ಇವರು ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ. 7-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಕುಲಪತಿಗಳಾದ ಡಾ. ಜಯಕರ್ ಎಸ್.ಎಂ. ಇವರು ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಟಿ. ವೆಂಕಟೇಶ ಮೂರ್ತಿ ಇವರು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರಿನ ಚಂಚನ ಪಾಳ್ಯದ ಶೃತಿ ಶಿಲ್ಪಿ ಏಕತಾರಿ ರಾಮಯ್ಯ ಇವರಿಗೆ ‘ಕಿರಂ ಕಾವ್ಯ ಶಿವರಾತ್ರಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಬಿ. ಗಂಗಾಧರ ಇವರು ಕಾವ್ಯ ಶಿವರಾತ್ರಿ ಪ್ರಸ್ತಾವನೆ ಗೈಯಲಿದ್ದಾರೆ.

