ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 03 ಜನವರಿ 2026ರಂದು ‘ಕಾವ್ಯಾಂ ವ್ಹಾಳೊ-10ʼ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ “2026ರ ವರ್ಷ ಸುಖಕರವಾಗಿರಲಿ. ‘ಕಾವ್ಯಾಂ ವ್ಹಾಳೊ’ ಎಂಬ ಕಾರ್ಯಕ್ರಮವು ಕಳೆದ ವರ್ಷ ಮಾರ್ಚ್ 8ರಂದು ಅಂತರಾಷ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಬಿಸಿ, ಇಂದು ಕಾವ್ಯಾಂ – ವ್ಹಾಳೊ ಇದರ 10ನೇ ಆವೃತ್ತಿಗೆ ತಲುಪಿದೆ. ಈ ಕಾರ್ಯಕ್ರಮದಲ್ಲಿ ಸರಿಸುಮಾರು 75ಕ್ಕೂ ಮಿಗಿಲಾಗಿ ಕವಿಗಳು ಇದರಲ್ಲಿ ಪಾಲುಗೊಂಡಿದ್ದಾರೆ. ಇವರ ಸ್ಪೂರ್ತಿಯನ್ನು ತೆಗೆದುಕೊಂಡು ಇನ್ನಷ್ಟು ಯುವ ಕವಿಗಳು ಕಾವ್ಯ ರಚನೆಯಲ್ಲಿ ತೊಡಗಬೇಕು’ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.

ಮುಖ್ಯ ಅತಿಥಿಗಳಾದ ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷರಾದ ಮಂಜುಳಾ ನಾಯಕ್ರವರು ಮಾತಾನಾಡಿ “ಕೊಂಕಣಿ ಭಾಷೆ ಮತ್ತು ಉಳಿವಿಗಾಗಿ ನಮ್ಮ ಹಿರಿಯರು ಮಾಡಿದ ಹೋರಾಟದ ಫಲದಿಂದ ಕೊಂಕಣಿ ಭಾಷೆಯು ನಮ್ಮ ದೇಶದ ಸಂವಿಧಾನ 8ನೇ ಪರಿಚ್ಚೇದಕ್ಕೆ ಸೇರಿದೆ. ಕರ್ನಾಟಕ ಸರಕಾರವು ಕೊಂಕಣಿ ಅಕಾಡೆಮಿಯನ್ನು ನೀಡಿದೆ. ಈಗ ನಾವು ಕೊಂಕಣಿಗರು ಅದನ್ನು ಉಳಿಸಿ, ಬೆಳೆಸುವ ಕೆಲಸವನ್ನು ಮಾಡತಕ್ಕದ್ದು, ಈ ನಿಟ್ಟಿನಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯು ನಿರಂತರವಾಗಿ ಕೆಲಸವನ್ನು ಮಾಡುತ್ತಾ ಇದೆ” ಎಂದು ಅಕಾಡೆಮಿಯನ್ನು ಅಭಿನಂದಿಸಿದರು.

ಕಳೆದ 46 ವರ್ಷಗಳಿಂದ ಕೊಂಕಣಿ ಸಾಹಿತ್ಯಿಕ ಪುಸ್ತಕಗಳನ್ನು ಹಾಗೂ ಸಿಡಿಗಳನ್ನು ಊರಿಂದೂರಿಗೆ ಹಬ್ಬ- ಹರಿದಿನಗಳಲ್ಲಿ ಕೊಂಡು ಹೋಗಿ ಮಾರಿ, ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಆಲ್ವಿನ್ ಸಿಕ್ವೇರಾ (ಮೆಲೋಡಿ ಮಾಸ್ಟರ್) ಇವರನ್ನು ಸನ್ಮಾನಿಲಾಯಿತು. ಖ್ಯಾತ ಕವಿಗಳಾದ ಅರವಿಂದ ಶ್ಯಾನಭಾಗ್ರವರು ಕವಿಗೋಷ್ಠಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ಮರ್ಲಿನ್ ಮಸ್ಕರೇನ್ಹಸ್, ನವೀನ್ ಕುಲ್ಶೇಕರ್, ವಾಯ್ಲೆಟ್ ಪಿರೇರಾ, ಸುಮಾ ವಸಂತ್, ರಿಚ್ಚಿ ಪಿರೇರಾ, ಪ್ರೀತಾ ಮಿರಾಂದ, ಸ್ಟ್ಯಾನಿಸ್ಲಸ್ ಡಿಸೋಜ, ಎಡ್ವರ್ಡ್ ಲೋಬೊ, ಅರುಣ್ ದಾಂತಿ, ಸಪ್ನಾ ಮೇ ಕ್ರಾಸ್ತಾ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ಸಮರ್ಥ್ ಭಟ್ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
