ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 06 ಡಿಸೆಂಬರ್ 2025ರಂದು ‘ಕಾವ್ಯಾಂ ವ್ಹಾಳೊ-9ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಪ್ರಾಸ್ತಾವಿಕವಾಗಿ ಮಾತಾನಾಡಿ “ಅಕಾಡೆಮಿಯು ವರ್ಷದ ಆರಂಭದಿಂದಲೇ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕವಿಗೋಷ್ಟಿಯು ಇದರಲ್ಲಿ ಒಂದು. ಕವಿಗಳಿಗೆ ವೇದಿಕೆಯನ್ನು ನೀಡುತ್ತಾ, ಹೊಸ ಕವಿಗಳನ್ನು ಪ್ರೋತ್ಸಾಹಿಸುತ್ತಿದೆ. ಖ್ಯಾತ ಕವಿಯಾದ ದಿ. ಚಾ. ಪ್ರಾ. ಡಿ’ಕೋಸ್ತರವರ 33ನೇ ವರ್ಷದ ಸ್ಮರಣೆಗಾಗಿ ಇಂದಿನ ಕವಿಗೋಷ್ಟಿಯನ್ನು ಅರ್ಪಿಸುತ್ತಿದ್ದೇವೆ. ಈ ಕವಿಗೋಷ್ಟಿಯು ಕವಿತೆಗಳನ್ನು ರಚಿಸಲು ಯುವಜನರಿಗೆ, ಹಿರಿಯರಿಗೆ ಪ್ರೇರಣೆಯಾಗಲಿ” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯ ಅತಿಥಿಯಾದ ಇನ್ಫೆಂಟ್ ಜೀಸಸ್ ಶ್ರೈನ್ನ ನಿರ್ದೇಶಕರಾದ ಫಾ. ಸ್ಟೀವನ್ ಆಲ್ವಿನ್ ಪಿರೇರಾರವರು “ವಿವಿಧ ಪ್ರದೇಶದಲ್ಲಿ ವಿವಿಧ ಭಾಷೆಗಳನ್ನು ಮಾತಾನಾಡುವ ಜನ ಹಾಗೂ ಸಾಹಿತಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಾಷೆಯ ಬರಹಗಳು ಹರಿದಾಡುತ್ತಿವೆ. ಆದರೆ ಜಾಲತಾಣಗಳಲ್ಲಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಬರೆಯುವವರ ಸಂಖ್ಯೆ ಬಹಳ ವಿರಳವಾಗಿದ್ದರೂ ಬರೆಯುವುದು ಅಸಾಧ್ಯವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೊಂಕಣಿ ಭಾಷೆಯು ಓದಲು ಸಿಗದಿದ್ದರೆ, ಕೊಂಕಣಿ ಭಾಷೆಯು ದುರ್ಬಲವಾಗಬಹುದು. ನಾವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಲಿಪಿಯಲ್ಲಿ ಕೊಂಕಣಿ ಬರೆಯಲು ಪ್ರಾರಂಭಿಸಿ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ಬರಹಗಾರರಿಗೆ ಹಾಗೂ ಓದುಗರಿಗೆ ಪ್ರೇರಣೆ ದೊರೆಯುವಂತೆ ಮಾಡಬಹುದು” ಎಂದರು.
ಖ್ಯಾತ ಕವಿಗಳಾದ ಶ್ರೀ ಆ್ಯಂಡ್ರು ಎಲ್. ಡಿಕುನ್ಹಾರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ದಿ. ಚಾ. ಪ್ರಾ. ಡಿಕೋಸ್ತರವರ ನೆನಪಿಗಾಗಿ ಅವರು ರಚಿಸಿದ ಉತ್ತಮ ಕವಿತೆಗಳನ್ನು ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಏಂಜಲ್ ಕುಟಿನ್ಹಾ, ರಿಷೊನ್ ನಜ್ರೆತ್, ಆನ್ಯ ದಾಂತಿ ಇವರು ವಾಚಿಸಿದರು. ವಿನ್ಸೆಂಟ್ ಪಿಂಟೊ ಆಂಜೆಲೊರ್, ಕೃತಿಕಾ ಕಾಮತ್, ರೇಮಂಡ್ ಡಿಕುನ್ಹಾ, ಎಲ್ಸನ್ ಡಿಕೋಸ್ತ ಹಿರ್ಗಾನ್, ಸೋನಿಯಾ ಡಿಕೋಸ್ತ, ಲವೀನ ದಾಂತಿ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀಮತಿ ಸಪ್ನಾ ಮೇ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ನವೀನ್ ಲೋಬೊ, ಸಮರ್ಥ್ ಭಟ್ ಉಪಸ್ಥಿತರಿದ್ದರು.

