ಬೆಂಗಳೂರು : ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ) ಕರ್ನಾಟಕ ಆಯೋಜಿಸುವ ಕಾವ್ಯಶ್ರೀ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕಾವ್ಯಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಚರ್ಚಾಗೋಷ್ಠಿ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 03 ನವೆಂಬರ್ 2024ರ ರವಿವಾರ ಬೆಳಿಗ್ಗೆ ಘಂಟೆ 09.30ರಿಂದ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ.
ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಶನ್ ಟ್ರಸ್ಟ್ ಇದರ ಡಾ. ಆರೂಢ ಭಾರತೀ ಸ್ವಾಮಿ ಇವರ ದಿವ್ಯ ಉಪಸ್ಥಿತಿಯಲ್ಲಿ ಉಪನ್ಯಾಸಕ, ಕವಿ, ಸಾಂಸ್ಕೃತಿಕ ಸಂಘಟಕ ಹಾಗೂ ಕನ್ನಡ ಪರ ಹೋರಾಟಗಾರರಾದ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಶ್ರೀ ಸುಬ್ಬು ಹೊಲೆಯಾರ್ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನ ವಿಜಯ ಪದವಿ ಕಾಲೇಜು ಇಲ್ಲಿನ ಕನ್ನಡ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಡಾ. ಆರ್. ವಾದಿರಾಜ್ ಸಮ್ಮೇಳನಾಧ್ಯಕ್ಷರ ಕುರಿತು ಮಾತನಾಡಲಿದ್ದು, ಬೆಂಗಳೂರಿನ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಶಿವಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಮಾಜ ಸೇವಕ, ಚಲನಚಿತ್ರ ನಟ ಹಾಗೂ ಉದ್ಯಮಿಯಾದ ಶ್ರೀ ಮಹೇಂದ್ರ ಮುಣ್ಣೋತ ಪ್ರಶಸ್ತಿ ಪ್ರದಾನ ಮಾಡಲಿದ್ದು, ಅಂತರಾಷ್ಟ್ರೀಯ ಮಟ್ಟದ ಕುಂಚ ಕಲಾವಿದರಾದ ಶ್ರೀಮತಿ ಶಾಂತಿ ವಾಸು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಧಾರವಾಡದ ಚೇತನ ಫೌಂಡೇಶನ್ ಇದರ ಅಧ್ಯಕ್ಷ, ಸಾಹಿತಿ ಹಾಗೂ ಪತ್ರಕರ್ತರಾದ ಡಾ. ಚಂದ್ರಶೇಖರ ಮಾಡಲಗೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ಪಂಡಿತ್ ಶ್ರೀಕಾಂತ್ ಚಿಮಲ್ ಮತ್ತು ತಂಡದವರಿಂದ ಸುಗಮ ಸಂಗೀತ, ಶ್ರೀಮತಿ ರಮ್ಯ ಚಲುವಮೂರ್ತಿ ಮತ್ತು ತಂಡದವರಿಂದ ಭರತ ನಾಟ್ಯ ಹಾಗೂ ಬೆಂಗಳೂರಿನ ಕು. ವೈನವಿ ಬಿ. ಸಿ. ಇವರಿಂದ ಶಿವತಾಂಡವ ನೃತ್ಯ ಪ್ರದರ್ಶನಗೊಳ್ಳಲಿದೆ.