ಮಂಗಳೂರು : ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 13 ಆಗಸ್ಟ್ 2024ರಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ವಿನಮ್ರ ಇಡ್ಕಿದು ಹಾಡಿದ ಕಯ್ಯಾರ ಕಿಞ್ಞಣ್ಣ ರೈಯವರ ಬಹಳ ಪ್ರಸಿದ್ಧ ಗೀತೆ ‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ….’ ಎಂಬ ದೇಶಭಕ್ತಿ ಗೀತೆಯನ್ನು ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಇವರು ಬಿಡುಗಡೆಗೊಳಿಸಿದರು. ಅವರು ಮಾತನಾಡಿ “ಕಯ್ಯಾರ ಕಿಞ್ಞಣ್ಣ ರೈ ನಮ್ಮ ನಾಡಿನ ಹೆಮ್ಮೆಯ ಕವಿ. ನಾಡಿನ ಬಗ್ಗೆ ದೇಶದ ಬಗ್ಗೆ ಅಪಾರ ಕಾಳಜಿ ಇದ್ದ ಕವಿ. ಇಂತಹ ಕವಿಯ ದೇಶಭಕ್ತಿ ಗೀತೆಯ ರಚನೆಗಳನ್ನು ಮತ್ತೆ ಮತ್ತೆ ಹೊಸ ಹೊಸ ರೂಪಗಳಲ್ಲಿ ಹಾಡುತ್ತಾ ದೇಶಭಕ್ತಿಯ ಸಂಚಲನವನ್ನು ಉಂಟುಮಾಡುವುದು ಶ್ಲಾಘನೀಯ ಕೆಲಸ. ಇದನ್ನು ನಮ್ಮ ವಿದ್ಯಾರ್ಥಿ ವಿನಮ್ರ ಇಡ್ಕಿದು ಮಾಡಿದ್ದಾನೆ ಎನ್ನುವುದು ಅಭಿಮಾನದ ಸಂಗತಿ” ಎಂದು ನುಡಿದರು.
‘ಏರೊಂದುಂಡು ರಾವೊಂದುಂಡು….’ ತುಳು ದೇಶಭಕ್ತಿ ಗೀತೆಯನ್ನು ಕೆನರಾ ಪಿ.ಯು. ಕಾಲೇಜಿನ ಸಂಚಾಲಕರಾದ ಟಿ. ಗೋಪಾಲಕೃಷ್ಣ ಶೆಣೈಯವರು ಬಿಡುಗಡೆಗೊಳಿಸಿದರು. ಅವರು ಮಾತನಾಡಿ “ಇಂದಿನ ನಮ್ಮ ಯುವ ಸಮುದಾಯ ಮತ್ತು ವಿದ್ಯಾರ್ಥಿ ಸಮುದಾಯ ಅಂದಿನ ನಮ್ಮ ಕವಿಗಳ ದೇಶಭಕ್ತಿಯ ಸಂರಚನೆಗಳನ್ನು ಅರಿತುಕೊಂಡು ದೇಶಭಕ್ತಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ. ಅನ್ನ ನೀರು ಕೊಟ್ಟು ಬದುಕು ನೀಡುತ್ತಿರುವ ದೇಶ ದೇವರೇ ಆಗಿದೆ” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ, ಪ್ರಾಂಶುಪಾಲರಾದ ಶ್ರೀಮತಿ ಲತಾಮಹೇಶ್ವರಿ ಕೆ.ಬಿ. ಉಪಸ್ಥಿತರಿದ್ದು ಶುಭ ಹಾರೈಸಿದರು. ಗಾಯಕ ವಿನಮ್ರ ಇಡ್ಕಿದು ಮತ್ತು ದೃಶ್ಯ ನಿರ್ದೇಶನ ಮತ್ತು ಸಂಕಲನವನ್ನು ಮಾಡಿದ ಶ್ರೀಮತಿ ವಿದ್ಯಾ ಯು. ಉಪಸ್ಥಿತರಿದ್ದರು. ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.