ಉಡುಪಿ : ಉಡುಪಿ ಡಿ. ವೈ. ಎಸ್ಪಿ.ಯಾದ ಡಿ. ಟಿ. ಪ್ರಭು ಇವರ ಪುತ್ರಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಪ್ರಿಯದರ್ಶಿನಿ ಪಿ. ವಿರಚಿತ `ಕೀಕಾ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 12-07-2024ನೇ ಶುಕ್ರವಾರದಂದು ಉಡುಪಿಯ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ “ಮಕ್ಕಳಿಗೆ ಎಳವೆಯಲ್ಲಿಯೇ ಓದಿನ ಹವ್ಯಾಸ ಬೆಳೆಸಬೇಕು. ಈಚಿನ ದಿನಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಓದುವವರ ಸಂಖ್ಯೆ ವಿರಳವಾಗಿದೆ. ಆದ್ದರಿಂದ ಓದಿನ ಹವ್ಯಾಸ ಹೆಚ್ಚಿಸುವ ಕಾರ್ಯಕ್ರಮ ಆಯೋಜಿಸಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದರೂ ಪ್ರಿಯದರ್ಶಿನಿ ಅವರು ಈ ಪುಸ್ತಕದಲ್ಲಿ ಪರಿಸರ, ಸ್ವಾತಂತ್ರ್ಯ ಹೋರಾಟ, ಹೆಚ್ಚಾಗಿ ರಾಣಾ ಪ್ರತಾಪಸಿಂಹ ಬಗೆಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳನ್ನು ದಾಖಲಿಸಿದ್ದಾರೆ. ಇದು ಶಿಕ್ಷಕ ಕೈಪಿಡಿಯಾಗಲು ಯೋಗ್ಯವಾಗಿದೆ.” ಎಂದರು.
ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಾಸ್ಯ ಸಾಹಿತಿ ಶಾಂತರಾಜ ಐತಾಳ್ ಮಾತನಾಡಿ “ಮೊಬೈಲ್ ಯುಗದಲ್ಲಿ ಜನರಿಗೆ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ.” ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಎಂ. ಜಿ. ಎಂ. ಕಾಲೇಜು ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಅಜ್ಜರಕಾಡು ಜಿ. ಶಂಕರ್ ಮಹಿಳಾ ಸರ್ಕಾರಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ರಾಜೇಂದ್ರ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಮಹೇಶ ಶೆಟ್ಟಿ ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ ಭಾಗವಹಿಸಿದರು. ಲೇಖಕಿ ಪ್ರಿಯದರ್ಶಿನಿ ಉಪಸ್ಥಿತರಿದ್ದರು.
ಪೊಲೀಸ್ ಕಾನ್ಸ್ ಟೇಬಲ್ ಯೋಗೀಶ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ನವ್ಯಾ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಪ್ರಿಯದರ್ಶಿನಿ ಇವರನ್ನು ಕ. ಸಾ. ಪ. ವತಿಯಿಂದ ಸನ್ಮಾನಿಸಲಾಯಿತು.