ಧಾರವಾಡ : ಮನೋಹರ ಗ್ರಂಥಮಾಲ ಹಾಗೂ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕೀರ್ತಿನಾಥ ಕುರ್ತಕೋಟಿ ಇವರ 97ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ ‘ಕೀರ್ತಿ ನೆನಪು’ ಹಾಗೂ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2025ರ ಸೋಮವಾರದಂದು ಧಾರವಾಡದ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಡಾ. ಶ್ರೀರಾಮ ಭಟ್ಟ ಮಾತನಾಡಿ “ಸುಮಾರು ಐದು ದಶಕಗಳ ಕಾಲ ಕುರ್ತಕೋಟಿ ಅವರು ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಕುರಿತು ಬರೆದ ಕೃತಿ ಹಾಗೂ ಲೇಖನಗಳ ಸಮಗ್ರ ಕೃತಿ ‘ವಾಗರ್ಥ’. ಬೇಂದ್ರೆ ಅವರ ಕಾವ್ಯ ಭಾವ ಪ್ರಧಾನವಾದರೆ, ಕುರ್ತಕೋಟಿ ಅವರ ವಿಮರ್ಶೆ ಜ್ಞಾನ ಪ್ರಧಾನವಾದದ್ದು. ಬೇಂದ್ರೆಯವರ ಕಾವ್ಯಕ್ಕೆ ಇರುವ ಮೌಲ್ಯವೇ ಕುರ್ತಕೋಟಿ ಅವರ ವಿಮರ್ಶೆಗೆ ಇದೆ. ಬೇಂದ್ರೆಯವರ ಕಾವ್ಯ ಅರ್ಥವಾಗ ಬೇಕಾದರೆ ಕುರ್ತಕೋಟಿ ವಿಮರ್ಶೆ ಓದಲೇ ಬೇಕು. ಮಾತು ಅರ್ಥದ ಅಭಿನ್ನತೆಯಿಂದ ಕೂಡಿದ್ದು ವಾಗರ್ಥ. ಕಾಳಿದಾಸನ ಈ ಶ್ಲೋಕ ಅದರಲ್ಲಿ ಬರುವ ವಾಗರ್ಥ ಎಂಬ ಶಬ್ದ ಬೇಂದ್ರೆ ಕಾವ್ಯಕ್ಕೆ ಕುರ್ತಕೋಟಿ ಅವರ ವಿಮರ್ಶೆಗೆ ಹೇಗೆ ಸಂಯೋಜಿತವಾಗುತ್ತದೆ” ಎಂಬುದನ್ನು ಸವಿಸ್ತಾರವಾಗಿ ಡಾ.ಶ್ರೀರಾಮ ಭಟ್ಟ ಅವರು ಹೇಳಿದರು.
ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ “ಕನ್ನಡ ಕಾವ್ಯ ಪರಂಪರೆಗೆ ಬೇಂದ್ರೆ ಹಾಗೂ ಕುರ್ತಕೋಟಿ ಇವರು ಕೊಟ್ಟಕೊಡುಗೆ ಅಪಾರವಾದದ್ದು. ಬೇಂದ್ರೆ ಕವಿತ್ವವನ್ನು ತಮ್ಮ ಬರಹದ ಮೂಲಕ ಕನ್ನಡ ವಿಮರ್ಶೆಯನ್ನು ಶ್ರೀಮಂತಗೊಳಿಸಿದವರು ಕುರ್ತಕೋಟಿ. ಅವರ ‘ವಾಗರ್ಥ’ ಅನೇಕ ಹೊಸ ವಿಷಯ ವಿಚಾರಗಳಿಂದ ಕೂಡಿದೆ” ಎಂದು ಸಂವಾದದಲ್ಲಿ ಪ್ರತಿಪಾದಿಸಿದರು.
ಬೇಂದ್ರೆ ಕಾವ್ಯ ಹಾಗೂ ಕುರ್ತಕೋಟಿ ಅವರ ವಿಮರ್ಶೆ ಇಂಗ್ಲಿಷ್ ಸಾಹಿತ್ಯದ ಇಂಬನ್ನು ಪಡೆದ ಬಗೆಯ ಬಗ್ಗೆ ಡಾ.ವಿನಾಯಕ ನಾಯಕರು ಸೋದಾಹರಣದ ಮೂಲಕ ವಿವರಿಸಿದರು. ಬೇಂದ್ರೆ ಕಾವ್ಯ ಮತ್ತು ಕುರ್ತಕೋಟಿ ಅವರ ವಿಮರ್ಶೆ ‘ವಾಗರ್ಥ’ದ ಬಂಧಕ್ಕೆ ಹೇಗೆ ಸ್ವರೂಪಿಸಿಕೊಳ್ಳುತ್ತದೆ. ಈ ಕೃತಿಯ ಶಿರೋನಾಮೆ ‘ವಾಗರ್ಥ’ವೇ ಏಕೆ? ಕಾವ್ಯ ಹೇಗೆ ವಾಕ್ ವಿಮರ್ಶೆ ಹೇಗೆ ಅರ್ಥ. ಅವೆರಡರ ಸಂಬಂಧ ಮತ್ತು ಸಂಯೋಜನೆ ಕುರಿತು ಡಾ.ಕೃಷ್ಣ ಕಟ್ಟಿ ವಿಷಯ ಪ್ರತಿಪಾದಿಸಿದರು.
ನಗರದ ಹಿರಿಯ ಸಾಹಿತಿಗಳು, ಚಿಂತಕರು ಇದರಲ್ಲಿ ಪಾಲ್ಗೊಂಡಿದ್ದರು. ಶ್ರೀ ಜಯತೀರ್ಥ ಜಹಗಿರದಾರ ವಂದನಾರ್ಪಣೆ ಮಾಡಿದರು.
Subscribe to Updates
Get the latest creative news from FooBar about art, design and business.
ಧಾರವಾಡದಲ್ಲಿ ‘ಕೀರ್ತಿ ನೆನಪು’ ಹಾಗೂ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮ
No Comments2 Mins Read
Previous Articleಮಂಗಳೂರಿನಲ್ಲಿ ಏರ್ಯ ಪ್ರಶಸ್ತಿ ಪ್ರದಾನ ಸಮಾರಂಭ | ಅಕ್ಟೋಬರ್ 14
Next Article ಖ್ಯಾತ ರಂಗಭೂಮಿ ನಟ ರಾಜು ತಾಳಿಕೋಟೆ ನಿಧನ