13 ಫೆಬ್ರವರಿ 2023, ಮಂಗಳೂರು: ನಿಲ್ಲದ ಕಾಲ ,ಸಿಗದ ಬಿಡುವು, ಸತ್ತ ಬದುಕು,ಇವೆಲ್ಲದರ ನಡುವೆ ತಪ್ಪಿಸಿಕೊಳ್ಳಲಾಗದಂತೆ ತಮ್ಮನ್ನು ತಾವೇ ಬಂಧಿಸಿಕೊಂಡಿರುವ ನಗರವಾಸಿಗಳ ಆಂತರ್ಯದ ಕೂಗು ಕೆಂಡೋನಿಯನ್ಸ್. ಇಲ್ಲಿ Hope for the best ಎನ್ನುತ್ತಲೇ ನಾಗರಿಕತೆಯ ಅಲಗಿಗೆ ಕೊರಳೊಡ್ಡಬೇಕು. ಮ್ಯಾನೇಜರ್, ಆಫೀಸರ್, ಜವಾನ, ಎನ್ನುತ್ತಾ ಕಟ್ಟಿಕೊಂಡಿರುವ ತಾರತಮ್ಯದ ಹೈರಾರ್ಕಿಯಲ್ಲಿ ಎಲ್ಲರೂ ಸಮಾನ ದುಃಖಿಗಳೇ. ಇವರನ್ನೆಲ್ಲೋ ನೋಡಿದ್ದೀನಿ ಎನ್ನುತ್ತಾ ಪಾತ್ರಧಾರಿ ದಾಮು ಗ್ರಾಮಗಳಿಂದ ನಗರಗಳಿಗೆ ಎಳೆದು ತರುವ ಭ್ರಮೆಗಳೊಡನೆ ನಗುತ್ತಲೇ ವ್ಯವಹರಿಸುತ್ತಾನೆ, ತನ್ನ ಹಳ್ಳಿಯನ್ನು ನೆನಪಿಸುತ್ತಾ ನಮ್ಮನ್ನು ಜೊತೆಯಲ್ಲೇ ಕರೆದೊಯ್ಯುತ್ತಾನೆ. ನಮ್ಮದೇ ಕಥೆಯನ್ನು ನಮ್ಮ ಮುಂದೆ ಹರವಿ ನಿಲ್ಲುತ್ತಾನೆ. ಅದೇ ದಾಮು ಸರ್ಕಸ್ನಲ್ಲಿ ಕುಣಿಯುತ್ತಾ ನಲಿಯುತ್ತಾ ಹಸಿವಿನಿಂದ ಬಳಲುತ್ತಾ ವೀಕೆಂಡ್ಗಳಿಗೆ ಕಾಯುವ ನಮ್ಮನ್ನು ಅಣಕಿಸುತ್ತಾನೆ. “ಇಲ್ಲೊಂದು ಮೆಷಿನ್ ಇದೆ ಅದರಲ್ಲಿ ನನೆಲ್ಲಾ ನೋಡ್ಬಹುದು, ನಾನ್ಯಾರಿಗೂ ಕಾಣೋದಿಲ್ಲ” ಎನ್ನುತ್ತಾ ಕಟ್ಟಿಕೊಡುವ ಜಾತ್ರೆಯ ದೃಶ್ಯ ಗದ್ಗದಿತವಾಗುವಂತೆ ಮಾಡುತ್ತದೆ. ದಾಮೂ, ಪುಷ್ಪ ,ದಿನೇಶ, ಅಷ್ಪಕ್, ಸಿಪ್ರಿಯನ್ ಪಾತ್ರಗಳು ನಮ್ಮ ಸುತ್ತವೇ ಕನ್ನಡಕ ಹಾಕಿ “ಸ್ಟೈಲಾಗಿ ಕಾಣ್ತಿರಬಹುದು. ಆದ್ರೆ ಅಂತರಾಳ ಬೇರೆಯೇ ಇದೆ.” ಎಂಬುದನ್ನು ಮನಗಾಣಿಸುತ್ತಾನೆ. ನೋ ಡೈರೆಕ್ಟ್ ಪಾಲಿಟಿಕ್ಸ್ ಎನ್ನುತ್ತಾ ಆಗಾಗ ಪ್ರಭುತ್ವವನ್ನು ವಿಮರ್ಶೆಗೆ ಒಡ್ಡುವ ನಾಟಕದ ಕಥಾ ಹಂದರ ಸರಳ ಸುಂದರ. ಜಾಗತೀಕರಣ, ನಗರೀಕರಣದ ಪ್ರಭಾವಗಳನ್ನು ಈ ಕತೆಯಲ್ಲಿ ಬಳಸಿಕೊಂಡ ಸೂಕ್ಷತೆಗೆ ಶ್ಲಾಘನೆಗಳು ಸಲ್ಲುತ್ತವೆ. ರಟ್ಟಿನ ಡಬ್ಬಗಳ ರೈಲು, ಕಾರ್, ಏರಿಪೋರ್ಟ್, ಹೋಟೇಲುಗಳಾಗಿ ಕೊನೆಯಲ್ಲಿ ಇದು ನಿಜವಲ್ಲ ಭ್ರಮೆ ಎಂದು ಹೇಳುವ ರಂಗತಂತ್ರ ಇದರ ವಿಶಿಷ್ಟತೆ.
“ನೀವೆಲ್ಲೂ ಹೋಗಿಲ್ಲ, ಇದು ನಿನ್ನೂರು, ನಾವು ಡೆವಲಪ್ಮೆಂಟ್ ಮಾಡಿದ್ದೀವಿ.”
“ಇಲ್ಲಿ ಯಾವುದೂ ನಿಜ ಅಲ್ಲ ಎಲ್ಲಾ mask.”
“ಅಗೋ ಅಲ್ಲಿ ಕೂತಿದ್ದಾರಲ್ಲ ಇವ್ರೆಲ್ಲಾ brands. ತಮ್ಮನ್ನು ತಾವು ಮಾರಾಟಕ್ಕಿಟ್ಟಿದ್ದಾರೆ.” ಅಂತ ಹೇಳ್ತಾ ನಿಮ್ಮನ್ನು ನಾಟಕದ ಭಾಗವಾಗಿಸಿ ಚಿಂತನೆಗೆ ದೂಡುವ ನಾಟಕ ಕೆಂಡೋನಿಯನ್ಸ್. ಏರ್ಪೋರ್ಟ್ನಿಂದ ಆರಂಭವಾಗಿ ಸರ್ಕಸ್, ಹಳ್ಳಿ, ಸಿಟಿ ಎಂದೆಲ್ಲಾ ಸುತ್ತಿಸಿ ಪುನಃ ಏರ್ಪೋರ್ಟ್ನಲ್ಲೇ ತಂದಿಳಿಸಿ, ಹೋಗಿ ಇನ್ನಾದರೂ ನಿಮ್ಮ ನಿಜ ವಿಳಾಸ ಹುಡುಕಿ ಎಂದು ಪ್ರೇಕ್ಷಕರನ್ನು ಸಂದಿಗ್ಧದಲ್ಲಿ ಸಿಲುಕಿಸುವ ಯತ್ನ “ಅಸ್ತಿತ್ವ”ದಿಂದ ಸಫಲವಾಗಿದೆ.
- ಚೇತನ್ ಕೊಪ್ಪ