ಬೆಂಗಳೂರು : ಕನ್ನಡ ಮತ್ತು ಮಲೆಯಾಳಂ ನಡುವೆ ಸೇತುವೆಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕೆ.ಕೆ. ಗಂಗಾಧರನ್ ಇವರು ದಿನಾಂಕ 19 ಜನವರಿ 2025ರಂದು ಈ ಲೋಕವನ್ನಗಲಿದರು. ಇವರ ನಿಧನದಿಂದ ಅನುವಾದ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ.
1949ರ ಮಾರ್ಚ್ 10ರಂದು ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ್ದ ಗಂಗಾಧರನ್ ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆ ಎಂಬಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿ.ಎಸ್.ಸಿ. ಪದವಿ ಪಡೆದರು. 1970ರಲ್ಲಿ ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ವೃತ್ತಿಯನ್ನು ಆರಂಭಿಸಿದ ಗಂಗಾಧರನ್ 1974ರಲ್ಲಿ ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ ವಿಭಾಗದಲ್ಲಿ ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿ, 2009ರಲ್ಲಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ರ, ಮನೆ ಮಾತು ಮಲಯಾಳಂ. ಅಂಚೆ ವಿಭಾಗದ ಬಿಡುವಿಲ್ಲದ ಕೆಲಸಗಳ ನಡುವೆ ಇದ್ದವರನ್ನು ಅನುವಾದ ಕ್ಷೇತ್ರಕ್ಕೆ ನೇರವಾಗಿ ಎಳೆದು ತಂದಿದ್ದು ‘ಒಡನಾಡಿ’ ಪತ್ರಿಕೆ. ಆ ಪತ್ರಿಕೆಗಾಗಿ ಇ.ಎಂ.ಎಸ್. ನಂಬೂದಿರಿಪಾದ್ ಇವರ ಬರಹಗಳಿಗೆ ಅನುವಾದಕರ ಅವಶ್ಯಕತೆ ಇತ್ತು. ಒಡನಾಡಿ ನಾರಾಯಣ ಆ ಜವಾಬ್ದಾರಿಯನ್ನು ಪರಿಚಯವಿದ್ದ ಕೆ.ಕೆ.ಜಿ.ಯವರಿಗೆ ವಹಿಸಿದರು. ಆ ಕೆಲಸ ಕಷ್ಟದಾಯಕವಾಗಿದ್ದರೂ ಗಂಗಾಧರನ್ ಅದನ್ನು ಸಾಧಿಸಿದರು. ಹೀಗೆ ಆರಂಭವಾದ ಅನುವಾದ ಕ್ರಮೇಣ ಅವರ ಪ್ರಧಾನ ಆಸಕ್ತಿಯಾಯಿತು.
ಕೆ.ಕೆ. ಗಂಗಾಧರನ್ ಇವರು ಪತ್ರಿಕೆಗಳಲ್ಲಿ ತಮ್ಮ ಅನುವಾದಗಳ ಪ್ರಕಟಣೆಯನ್ನು 1983ರಲ್ಲಿ ಪ್ರಾರಂಭಿಸಿದರೂ, 2009ರಲ್ಲಿ ನಿವೃತ್ತಿಯಾದ ಬಳಿಕವೇ ಅವರ ಮೊದಲ ಪುಸ್ತಕ ಪ್ರಕಟವಾಯಿತು. ಮುಂದೆ ಸುಮಾರು 20 ಅನುವಾದಿತ ಕೃತಿಗಳು ಹೊರಬಂದವು. ಗಂಗಾಧರನ್ ಇವರು ಮಲಯಾಳಂನಲ್ಲಿ ಪ್ರಸಿದ್ಧರಾಗಿರುವ ತಗಳಿ ಶಿವಶಂಕರ ಪಿಳ್ಳೈ, ಎಸ್.ಕೆ. ಪೊಟ್ಟೆಕ್ಕಾಟ್, ಎಂ.ಟಿ. ವಾಸುದೇವನ್ ನಾಯರ್, ವೈಕ್ಕಂ ಮಹಮ್ಮದ್ ಬಷೀರ್, ಮಲಯಾಟ್ಟೂರು ರಾಮಕೃಷ್ಣನ್, ಪುನತ್ತಿಲ್ ಕುಂಞಬ್ದುಲ್ಲ ಮೊದಲಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದೇ ರೀತಿ ಬಹು ಜನಪ್ರಿಯರಾಗಿರುವ ಕಮಲಾದಾಸ್, ಕವಿತಾ ಮೊದಲಾದವರ ಕೃತಿಗಳನ್ನೂ ಕನ್ನಡಕ್ಕೆ ಅನುವಾದಿಸಿದ ಸಾಧಕ ಇವರು. ನಟಿ ಶಕೀಲಾರವರ ಅತ್ಮಕತೆಯನ್ನೂ, ಅದರೊಡನೆ ಉಣ್ಣಿಕೃಷ್ಣನ್ ಪುದೂರ್ ಅವರ ಜೈನ ಇತಿಹಾಸವನ್ನು ಆಧರಿಸಿದ ‘ಧರ್ಮಚಕ್ರ’ ಕಾದಂಬರಿ ಮತ್ತು ಮಾಂತ್ರಿಕ ಕಾದಂಬರಿಗಳನ್ನು ಬರೆಯುವುದರಲ್ಲಿ ನಿಸ್ಸೀಮರಾದ ಏಟುಮಾನೂರು ಶಿವಕುಮಾರ್ ಅವರ ‘ಅಷ್ಟಮಂಗಲ’, ಪ್ರಸಿದ್ಧ ಪೌರಾಣಿಕ ಕಾದಂಬರಿ ‘ದಮಯಂತಿ’ ಮುಂತಾದ ವೈವಿಧ್ಯವೂ ಇವರಿಂದ ಅನುವಾದಗೊಂಡಿವೆ. ಉಣ್ಣಿಕೃಷ್ಣನ್ ಪುದೂರ್, ಮೆಯವೇಲಿ ಬಾಬೂಜಿ, ಅರವಿಂದನ್, ಜಿ.ಡಿ. ಗೇಬ್ರಿಯೆಲ್, ಸುಧಾಕರನ್ ರಾಮಂತಳಿ, ಡಾ. ಎಂ.ಪಿ. ರಾಜನ್, ಬ್ರಿಜಿ, ಮೇಘನಾಥನ್, ಇಂದಿರಾ ಬಾಲನ್, ಡಾ. ಪ್ರಭಾಕರನ್ ಪಳಸ್ಸಿ, ಕೆ.ಕೆ. ಸುಧಾಕರನ್, ಪಿ.ಎನ್. ವಿಜಯನ್, ಬಾಲಕೃಷ್ಣನ್ ಮಾಂಗಾಡ್, ಹೊಸ ಜನಾಂಗದ ಕತೆಗಾರ ಸಂತೋಷ್ ಏಚ್ಚಿಕಾನಂ ಮೊದಲಾದವರ ಬರಹಗಳನ್ನೂ ಅನುವಾದಿಸಿದ ಖ್ಯಾತಿ ಇವರದು.
ಜೀವನದಲ್ಲಿ ತಡವಾಗಿಯಾದರೂ ಕೆ.ಕೆ. ಗಂಗಾಧರನ್ ಇವರಿಗೆ ಪುರಸ್ಕಾರಗಳು ದೊರೆತವು. ಇವರ ‘ಮಲಯಾಳಂ ಕಥೆಗಳು’ ಅನುವಾದ ಕೃತಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಲಭಿಸಿತ್ತು. ಹಲವು ಪುಸ್ತಕ ಪ್ರಶಸ್ತಿಗಳೇ ಅಲ್ಲದೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದಕರಿಗೆ ನೀಡುವ 2017ನೇ ಸಾಲಿನ ಗೌರವ ಪ್ರಶಸ್ತಿಯನ್ನು ಕೆ.ಕೆ. ಗಂಗಾಧರನ್ ಇವರಿಗೆ ನೀಡಿ ಗೌರವಿಸಿತ್ತು. ಅವರ ನೆನಪುಗಳನ್ನು ಉಳಿಸುವ ಕೆಲಸವಾಗಬೇಕೆಂದು ತಮ್ಮ ಸಂತಾಪ ಸಂದೇಶದಲ್ಲಿ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿರುತ್ತಾರೆ.