ಕೀನ್ಯಾದ ಪ್ರಸಿದ್ಧ ಲೇಖಕ, ಆಫ್ರಿಕಾದ ಸಾಹಿತ್ಯ ದಿಗ್ಗಜ, ವಿಶೇಷವಾಗಿ ತಮ್ಮ ಸ್ಥಳೀಯ ಗಿಕುಯು ಭಾಷೆಯಲ್ಲಿ ಬರೆಯುತ್ತಿದ್ದ ಕೆಲವೇ ಲೇಖಕರಲ್ಲಿ ಒಬ್ಬರಾಗಿದ್ದ ಗೂಗಿ ವಾ ಥಿಯಾಂಗೋ ತಮ್ಮ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ. ಇವರು ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು.
ಅವರನ್ನು ಪೂರ್ವ ಆಫ್ರಿಕಾದ ಪ್ರಮುಖ ಕಾದಂಬರಿಕಾರ ಎಂದು ಪರಿಗಣಿಸಲಾಗಿದೆ. ಅವರ ಜನಪ್ರಿಯ ‘ವೀಪ್ ನಾಟ್- ಚೈಲ್ಡ್ (1964) ಪೂರ್ವ ಆಫ್ರಿಕನ್ ಒಬ್ಬರಿಂದ ಇಂಗ್ಲೀಷ್ನಲ್ಲಿ ಪ್ರಕಟವಾದ ಮೊದಲ ಪ್ರಮುಖ ಕಾದಂಬರಿ. ಅವರ ಮುಖ್ಯವಾದ ಕಾದಂಬರಿಗಳೆಂದರೆ ‘ದಿ ರಿವರ್ ಬಿಟ್ವೀನ್’, ‘ಎ ಗ್ರೈನ್ ಆಫ್ ವೀಟ್’, ‘ಡೆವಿಲ್ ಆನ್ ದಿ ಕ್ರಾಸ್’, ‘ವಿಜಾರ್ಡ್ ಆಫ್ ದಿ ಕ್ರೊ’. ಇವಲ್ಲದೆ ನಾಟಕ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದು, ಕೆಲವು ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ. ಥಿಯಾಂಗೋ ಅವರ ಬಹುತೇಕ ಬರವಣಿಗೆಗಳು ಆಫ್ರಿಕಾದ ವಸಾಹತುಶಾಹಿ ಇತಿಹಾಸದ ವಿಷಾದಕರ ಪರಂಪರೆಯ ಕುರಿತು ಗಂಭೀರವಾಗಿ ಚರ್ಚಿಸುತ್ತವೆ. 1977ರಲ್ಲಿ ತಮ್ಮ ನಾಲ್ಕನೇ ಕಾದಂಬರಿ ‘ಪೆಟಲ್ಸ್ ಆಫ್ ಬ್ಲಡ್ ಮತ್ತು ‘ದಿ ಟ್ರಯಲ್ ಆಫ್ ಡೆಡಾನ್ ಕಿಮತಿ’ ಎಂಬ ನಾಟಕಗಳನ್ನು ಪ್ರಕಟಿಸಿದರು. ಅವರ ಮತ್ತೊಂದು ಇಂಗ್ಲೀಷ್ ನಾಟಕ ‘ಐ ವಿಲ್ ಮ್ಯಾರಿ ವೆನ್ ಐ ವಾಂಟ್’ ಇದನ್ನು ‘ಗಾಹಿಕಾ ದೀಂಡಾ’ ಎಂಬ ಶೀರ್ಷಿಕೆಯೊಂದಿಗೆ ಗಿಕುಯು ಭಾಷೆಗೂ ಅನುವಾದಿಸಿದ್ದಾರೆ.
ಥಿಯಾಂಗೋ 1963ರಲ್ಲಿ ಉಗಾಂಡಾದ ಕಂಪಾಲಾದ ಮಕೆರೆರೆ ವಿಶ್ವವಿದ್ಯಾಲಯದಿಂದ ಮತ್ತು 1964ರಲ್ಲಿ ಇಂಗ್ಲೆಂಡ್ನ ಯಾರ್ಕ್ಪೈರ್ನ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಲೀಡ್ಸ್ ನಲ್ಲಿ ಪದವಿ ಪಡೆದ ಬಳಿಕ, ಅವರು ಕೀನ್ಯಾದ ನೈರೋಬಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಮತ್ತು ಅಮೆರಿಕದ ಇಲಿನಾಯ್ಸ್ ನ ಇವಾನ್ಸ್ಟನ್ ನಾರ್ತವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ನ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1972ರಿಂದ 1977ರವರೆಗೆ ನೈರೋಬಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿ ಮತ್ತು ಸಾಹಿತ್ಯ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂಗ್ಲೀಷ್ನಲ್ಲಿ ಬರೆಯುವುದನ್ನು 1980ರಲ್ಲಿ ಕೈಬಿಟ್ಟ ಥಿಯಾಂಗೋ ತಮ್ಮ ಮಾತೃ ಭಾಷೆ ‘ಗಿಕುಯು’ದಲ್ಲಿ ಬರೆಯಲು ಆರಂಭಿಸಿದರು.
2010ರಲ್ಲಿ ಪೆರು ದೇಶದ ‘ಮಾರಿಯೋ ವರ್ಗಾಸ್ ಯೋಸಾ ಪ್ರಶಸ್ತಿ’ ಹಾಗೂ 2021ರಲ್ಲಿ ಅವರ ಗಿಕುಯು ಭಾಷೆಯ ಪದ್ಯಕಾದಂಬರಿ ‘ದ ಪರ್ಫೆಕ್ಟ್ ನೈನ್’ ಅಂತರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ಗೆ ನಾಮನಿರ್ದೇಶಿತವಾಗುವ ಮೂಲಕ ಮೊದಲ ಆಫ್ರಿಕನ್ ಮೂಲ ಭಾಷೆಯ ಲೇಖಕರೇನಿಸಿದ್ದರು. ತಮ್ಮದೇ ಕೃತಿಯನ್ನು ತಾವು ಭಾಷಾಂತರಿಸಿ ಪ್ರತಿಷ್ಠಿತ ನಾಮನಿರ್ದೇಶನ ಪಡೆದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಅವರ ಮಕ್ಕಳಾದ ಟೀ ವಾ ಥಿಯಾಂಗೋ, ಮುಕೊಮಾ ವಾ ಥಿಯಾಂಗೋ, ನೂಕು ವಾ ಥಿಯಾಂಗೋ ಮತ್ತು ವಾಂಜಿಕು ವಾ ಥಿಯಾಂಗೋ ಅವರಂತೆಯೆ ಲೇಖಕರಾಗಿ ಹೆಸರು ಮಾಡಿರುವವರು.