ಕಾಸರಗೋಡು : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕಾಸರಗೋಡು ಮತ್ತು ಕನ್ನಡ ಭವನ ಪ್ರಕಾಶನ ಇದರ ವತಿಯಿಂದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) – ಕಥಾ ಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ 2024’ವು ದಿನಾಂಕ 10-03-2024ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ.
ಸಮಾರಂಭವನ್ನು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷರಾದ ಮಾನ್ಯ ಶ್ರೀ ಎಂ.ಕೆ. ಪ್ರಾಣೇಶ್ ಇವರು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸ್ವಾಗತಿಸಲಿದ್ದು, ಕಥಾ ಬಿಂದು ಪ್ರಕಾಶನದ ಅಧ್ಯಕ್ಷರಾದ ಪಿ.ವಿ. ಪ್ರದೀಪ್ ಕುಮಾರ್ ಪ್ರಾಸ್ತಾವಿಕ ಭಾಷಣ ಗೈಯಲಿದ್ದಾರೆ.
ಈ ಸಮಾರಂಭಕ್ಕೆ ಮುಖ್ಯ ಅಥಿತಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಕೇರಳ ರಾಜ್ಯ ಘಟಕದ ಅಧ್ಯಕ್ಷರಾದ ಎ.ಆರ್. ಸುಬ್ಬಯ್ಯಕಟ್ಟೆ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು, ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿಯಾದ ವಿಶಾಲಾಕ್ಷ ಪುತ್ರಕಳ ಇವರುಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕವಯತ್ರಿ ರೇಖಾ ರೋಶನ್ ಇವರ ‘ಗರಿ ಬಿಚ್ಚಿದ ಭಾವ’ ಕವನ ಸಂಕಲನದ ಕೃತಿ ಬಿಡುಗಡೆ, ವಿವಿಧ ಪ್ರಶಸ್ತಿ ಪ್ರದಾನ, ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಶ್ರೀಮತಿ ಸುಭಾಷಿಣಿಚಂದ್ರ ಕನ್ನಟಿಪ್ಪಾರೆ ಬೇಕೂರು ಮತ್ತು ಶ್ರೀಮತಿ ರೇಖಾ ಸುಧೇಶ್ ರಾವ್ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆನಪಿನ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ’ 2024 ಶ್ರೀಮಾನ್ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರಿಗೆ ಕನ್ನಡ ಭವನದ ಗುರುನಮನದೊಂದಿಗೆ ನೀಡಲಾಗುವುದು. ಕನ್ನಡ ಕವಿ ಹೋರಾಟಗಾರ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ನೆನಪಿನ ‘ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ’ 2024 ಗೌರವಾನ್ವಿತ ಕವಿ, ಸಾಹಿತಿ ಸತ್ಯವತಿ ಭಟ್ ಕೊಳ್ಚಪ್ಪೆ ಇವರಿಗೆ, ಕವಯತ್ರಿ ರೇಖಾ ರೋಶನ್ ಇವರಿಗೆ ‘ಕನ್ನಡ ಭವನ ಅಭಿನಂದನಾ ಪ್ರಶಸ್ತಿ’, ಕನ್ನಡ ಭವನದ ರಾಜ್ಯಾಂತರ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ 2024 – ಡಾ. ಕೊಳ್ಚಪ್ಪೆ ಗೋವಿಂದ ಭಟ್, ವಿರಾಜ್ ಅಡೂರು, ಶಿಕ್ಷಕಿ ಶಾಂತಾ ಪುತ್ತೂರು, ಲಿಖಿತ್ ಹೊನ್ನಾಪುರ ರಾಮನಗರ, ಬಿ. ಶಿವಕುಮಾರ್ ಕೋಲಾರ, ಅಖಿಲೇಶ್ ನಗುಮುಗಂ, ಅಪೂರ್ವ ಕಾರಂತ್ ಪುತ್ತೂರು, ಜಯಾನಂದ ಪೆರಾಜೆ ಇವರುಗಳಿಗೆ, ‘ಕನ್ನಡ ಭವನದ ಸಮಾಜ ಸೇವಾರತ್ನ ಪ್ರಶಸ್ತಿ 2024 – ಧಾರ್ಮಿಕ ಮುಂದಾಳು ಶ್ರೀಮಾನ್ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಮತ್ತು ಶ್ರೀಮಾನ್ ಹೊನ್ನೂರ್ ಅಲಿ ವಿಜಯನಗರ ಸಮಾಜ ಸೇವಕರು ಇವರುಗಳಿಗೆ ನೀಡಿ ಸನ್ಮಾನಿಸಲಾಗುವುದು.
ಕೇರಳ-ಕರ್ನಾಟಕದ ಜಾನಪದ ನೃತ್ಯ, ಭಾವ ಗಾನಾಲಾಪನೆ, ಯೋಗ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮ ನೀಡಿದ ಕಲಾವಿದರಿಗೆ ‘ಕೇರಳ-ಕರ್ನಾಟಕ ಸಂಸ್ಕೃತಿ ಉತ್ಸವ ಸಾಧಕ 2024’ ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು.