ಕಾಸರಗೋಡು : ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಕೇಂದ್ರ ಕಚೇರಿ, ಹಾಸನ, ಕಾಸರಗೋಡು ಜಿಲ್ಲಾ ಘಟಕ, ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕಾಸರಗೋಡಿನ ವಿಸ್ಡಮ್ ಇನ್ಸ್ಟಿಟ್ಯೂಷನ್ಸ್ ನೆಟ್‌ವರ್ಕ್ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಕೇರಳ, ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನವು ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಲಿದೆ.
ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಯ ನಂತರ ಕುಮಾರಿ ಕೃಷ್ಣಿಮಾ ಭುವನೇಶ್ ಕೂಡ್ಲು ಇವರಿಂದ ಸ್ವಾಗತ ನೃತ್ಯ ಜರುಗಲಿದೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಸಮ್ಮೇಳನವನ್ನು ಉದ್ಘಾಟಿಸುವರು. ಕರ್ನಾಟಕ ಸರಕಾರದ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕೃತಿ ಬಿಡುಗಡೆ ಮಾಡುವರು. ಶಿಕ್ಷಕ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಶಿಕ್ಷಕಿ ಕೆ.ಟಿ. ಶ್ರೀಮತಿ ಮೈಸೂರು ಇವರು ಶುಭಾಶಂಸನೆ ಮಾಡುವರು. ಕಾರ್ಯಕ್ರಮದಲ್ಲಿ ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ಕೆ. ವಾಮನ್ ರಾವ್ ಬೇಕಲ್, ಸ್ಪಂದನ ಸಿರಿ ಸ್ಥಾಪಕ ರಾಜ್ಯಾಧ್ಯಕ್ಷೆ ಜಿ.ಎಸ್. ಕಲಾವತಿ ಮಧುಸೂದನ, ಸ್ಪಂದನ ಸಿರಿ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ‘ರಾಷ್ಟ್ರೀಯ ಸ್ಪಂದನ ಸಿರಿ ಶಿಕ್ಷಣ, ಕೃಷಿ, ಸಾಹಿತ್ಯ ಸೇವಾ ವಿಭೂಷಣ’ ಪ್ರಶಸ್ತಿ ಹಾಗೂ ಕಾಸರಗೋಡಿನ ಕನ್ನಡ ಭವನದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ 2024 ಪ್ರದಾನ ಮಾಡಲಾಗುವುದು.
‘ಸರ್ಕಾರಿ ಕನ್ನಡ ಶಾಲೆಗಳ ಉಳಿವಿನಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯದಲ್ಲಿ ನಡೆಯುವ ಶೈಕ್ಷಣಿಕ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಪಿ.ಬಿ. ಶ್ರೀನಿವಾಸ ರಾವ್ ವಹಿಸುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ವಿಚಾರ ಮಂಡಿಸುವರು. ಬದಿಯಡ್ಕದ ಶ್ರೀಭಾರತಿ ವಿದ್ಯಾಪೀಠದ ಮುಖ್ಯ ಶಿಕ್ಷಕ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಮತಿ ಲಲಿತಾಲಕ್ಷ್ಮೀ ಕುಳಮರ್ವ, ಕಾಸರಗೋಡಿನ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಕೆ.ಪಿ. ರಾಜೇಶ್ಚಂದ್ರ ಸಂವಾದ ನಡೆಸುವರು.
ಬಳಿಕ ‘ಕೃಷಿ ಅಭಿವೃದ್ಧಿಯಲ್ಲಿ ಕೃಷಿಕರ ಮತ್ತು ಗ್ರಾಹಕರ ಪಾತ್ರ’ ಎಂಬ ವಿಚಾರದಲ್ಲಿ ನಡೆಯುವ ಕೃಷಿ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸತ್ಯನಾರಾಯಣ ಬೆಳೇರಿ ವಹಿಸಲಿದ್ದಾರೆ. ಮಂಗಳೂರು ಆಕಾಶವಾಣಿಯ ನಿರ್ದೇಶಕರಾದ ಡಾ. ಪಿ.ಎಸ್. ಸೂರ್ಯನಾರಾಯಣ ಭಟ್ ಆಶಯ ಭಾಷಣ ಮಾಡುವರು. ಪ್ರಗತಿಪರ ಕೃಷಿಕರಾದ ಪುಟ್ಟಸ್ವಾಮಿ ಗೌಡ ಹೊಳೇನರಸೀಪುರ, ಎಚ್.ಎಂ. ರಮೇಶ್ ನುಗ್ಗೆಹಳ್ಳಿ ಸಂವಾದ ನಡೆಸುವರು. ಚನ್ನರಾಯಪಟ್ಟಣದ ಕವಿತಾ ಮತ್ತು ಬಳಗದವರು ರೈತಗೀತೆ ಪ್ರಸ್ತುತ ಪಡಿಸಲಿದ್ದಾರೆ.
ನಂತರ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಸಾಹಿತಿ ವಿರಾಜ್ ಅಡೂರು ವಹಿಸುವರು. ಕವಿಗೋಷ್ಠಿಯಲ್ಲಿ ನಾಟಕ ಭಾರ್ಗವ ಕೆಂಪೇರಾಜು ಮೈಸೂರು, ನರಸಿಂಹ ಭಟ್ ಏತಡ್ಕ, ಶ್ರೀಹರಿ ಭಟ್ ಪೆಲ್ತಾಜೆ, ವಿಜಯ ಸುಬ್ರಹ್ಮಣ್ಯ ಕುಂಬಳೆ, ಗುರುರಾಜ್ ಎಂ.ಆರ್. ಕಾಸರಗೋಡು, ಸೌಮ್ಯ ಕಾರ್ಲೆ ಮುಳ್ಳೇರಿಯ, ಪ್ರಮೀಳಾ ಚುಳ್ಳಿಕ್ಕಾನ, ಹಿತೇಶ್ ಕುಮಾರ ನೀರ್ಚಾಲ್, ರಾಧಾ ಮೋಹನ್ ಕುಮಾರ್ ಹಾಸನ, ಆನಂದ ರೈ ಅಡ್ಕಸ್ಥಳ, ಡಾ. ವಾಣಿಶ್ರೀ ಕಾಸರಗೋಡು, ಪ್ರಭಾವತಿ ಕೆದಿಲಾಯ ಪುಂಡೂರು, ಚಂದ್ರಿಕಾ ಶೆಣೈ ಮುಳ್ಳೇರಿಯಾ, ವಿಜಯರಾಜ ಪುಣಿಂಚಿತ್ತಾಯ, ರೇಖಾ ಸುರೇಶ್ ರಾವ್, ಗಿರೀಶ್ ಪಿ.ಎಂ. ಕಾಸರಗೋಡು, ಚಿತ್ರಕಲಾ ದೇವರಾಜ್ ಆಚಾರ್ಯ ಕುಂಬಳೆ, ಜ್ಯೋತ್ಸ್ನಾ ಕಡಂದೇಲು, ಶ್ಯಾಮಲಾ ರವಿರಾಜ್ ಕುಂಬಳೆ, ಅನ್ನಪೂರ್ಣ ಎನ್. ಕುತ್ತಾಜೆ, ಗಿರಿಜಾ ಹಾಸನ, ದೇವರಾಜ್ ಆಚಾರ್ಯ ಕುಂಬಳೆ, ರಮ್ಯಾ ಮೂರ್ನಾಡು ಕೊಡಗು ಇವರುಗಳು ಭಾಗವಹಿಸುವರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಜಿ.ಎಸ್. ಕಲಾವತಿ ಮಧುಸೂದನ ವಹಿಸುವರು. ಸಾಹಿತಿ ಆ.ನಾ. ಪೂರ್ಣಿಮಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸುಂದರೇಶ್ ಡಿ. ಉಡುವೆರೆ ಸಮಾರೋಪ ಭಾಷಣ ಮಾಡುವರು. ಪ್ರಕಾಶ್ಚಂದ್ರ ಕೆ.ಪಿ., ಶ್ರೀಮತಿ ಯಶೋದಾ ತುಮಕೂರು, ಕೆ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಮಮತಾರಾಣಿ ಎಸ್.ಎನ್. ಅರಸಿಕೆರೆ ಮೊದಲಾದವರು ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಡಾ. ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಹಾಗೂ ಹಾಸನದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೃಂದ ತಂಡದಿಂದ ‘ಗೀತ ವೈವಿಧ್ಯ’ ಜರುಗಲಿದೆ.