ಉಡುಪಿ : ಉಡುಪಿಯ ಭಾವನಾ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ವೆಂಟನ ಫೌಂಡೇಷನ್ ಇದರ ಸಹಕಾರದೊಂದಿಗೆ ಆಯೋಜಿಸುವ ಸ್ಥಳೀಯ ಜಾನಪದ ಕಲೆಗಳ ಸರಣಿ ಕಾರ್ಯಗಾರವಾದ ‘ಜಾನಪದ’ ದಿನಾಂಕ 14-10-2023 ಹಾಗೂ 15-10-2023ರಂದು ಉಡುಪಿಯ ಬಡಗುಪೇಟೆಯಲ್ಲಿ ನಡೆಯಲಿದೆ.
ಭಾವನಾ ಸ್ಕೂಲ್ ಆಫ್ ಆರ್ಟ್ ಇದರ 20ನೇ ವರ್ಷದ ಸಂಭ್ರಮಾಚರಣೆಯ ಸಲುವಾಗು ಆಯೋಜಿಸಲಾಗುತ್ತಿರುವ ಸರಣಿಯ 7ನೇ ಭಾಗವಾಗಿ ಕೇರಳದ ಭಿತ್ತಿ ಚಿತ್ರಗಳ ಈ ಕಾರ್ಯಗಾರವನ್ನು ಖ್ಯಾತ ಕಲಾವಿದ ಕೇರಳದ ವೇಣುಗೋಪಾಲ್ ಟಿ.ಕೆ ನಡೆಸಿಕೊಡಲಿದ್ದಾರೆ.
ಕೇರಳದ ಭಿತ್ತಿ ಚಿತ್ರಗಳ ಬೇರುಗಳು ಕ್ರಿ.ಶ 9ನೇ ಶತಮಾನಗಳ ಹಿಂದೆಯೇ ಇದ್ದು, ಇದು ಕೇರಳದ ಶ್ರೀಮಂತ ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿದೆ. ಈ ಪುರಾತನ ಸಂಪ್ರದಾಯ ಕಳೆಯು ಕೇರಳದ ರಾಜಮನೆತನದಿಂದ ಪೋಷಣೆಗೊಂಡಿತು. ಇದು ದೈವಿಕ ಚಿತ್ರಣ ಮತ್ತು ವಿಶಿಷ್ಟವಾದ ಪ್ರಾದೇಶಿಕ ಶೈಲಿಯೊಂದಿಗೆ ಆಕರ್ಷಿಸುತ್ತದೆ. ಐದು ನೈರ‍್ಗಿಕ ಬಣ್ಣಗಳ ಬಳಕೆಯಿಂದ ಈ ಚಿತ್ರಗಳನ್ನು ರಚಿಸಲಾಗುತ್ತದೆ. ಕೇರಳದ ಭಿತ್ತಿ ಚಿತ್ರಗಳು ಅದ್ಭುತವಾದ ಕಲಾತ್ಮಕ ಪರಂಪರೆಯನ್ನು ಒಳಗೊಂಡಿದೆ.
ವೇಣುಗೋಪಾಲ್ ಟಿ.ಕೆ :
ಕಾಲಡಿ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾನಿಲಯದಿಂದ ಕೇರಳದ ಭಿತ್ತಿ ಚಿತ್ರಗಳು ವಿಷಯದಲ್ಲಿ ಪದವಿ ಪಡೆದಿರುವ ವೇಣುಗೋಪಾಲ್ ಟಿ.ಕೆ. ಅವರು ಸರಿಸುಮಾರು ಹದಿನೈದು ವರ್ಷಗಳಿಂದ ಕೇರಳದ ಭಿತ್ತಿ ಚಿತ್ರಗಳನ್ನು ಸಮಕಾಲೀನ ಮಾಧ್ಯಮದಲ್ಲಿ ರಚಿಸುತ್ತಿದ್ದಾರೆ. ‘ಕಲಮೆಝುತ್ತು ಮಂಡಲಂ’ ಕಲೆಯಲ್ಲಿ ಪಾರಂಗತರಾಗಿರುವ ಇವರು ಸಮಕಾಲೀನ ಕಲಾತ್ಮಕ ಅಭಿವ್ಯಕ್ತಿಗಳಲ್ಲಿ ಕೇರಳದ ಭಿತ್ತಿ ಚಿತ್ರಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜನಾರ್ದನ ಹಾವಂಜೆ – 9845650544 ಇವರನ್ನು ಸಂಪರ್ಕಿಸಬಹುದು.